ಗದಗ: ಮೈಸೂರು ರಾಜ್ಯಕ್ಕೆ ಕರ್ನಾಟಕ ನಾಮಕರಣಗೊಂಡು 50 ವರ್ಷ ಪೂರ್ಣಗೊಂಡಂತಹ ಹಿನ್ನೆಲೆಯಲ್ಲಿ ಸಚಿವ ಎಚ್ಕೆ ಪಾಟೀಲ ನೇತೃತ್ವದಲ್ಲಿ ಗದಗ ನಗರದ ಕಾಟನ್ ಸೇಲ್ ಸೋಸೈಟಿ ಆವರಣದಲ್ಲಿ ಆಯೋಜಿಸಲಾಗಿದೆ.
ಐವತ್ತು ವರ್ಷಗಳ ಹಿಂದೆ ಜರುಗಿದ ಕರ್ನಾಟಕ ನಾಮಕರಣ ಸಂಭ್ರಮೋತ್ಸವದ ಐತಿಹಾಸಿಕ ಕಾರ್ಯಕ್ರಮದ ಮರುಸೃಷ್ಟಿಯ ಕಾರ್ಯಕ್ರಮಕ್ಕೆ ಗದಗ-ಬೆಟಗೇರಿ ಇಡೀ ನಗರ ದೀಪಾಲಂಕಾರ ಹಾಗೂ ಚಿತ್ತಾರಗಳೊಂದಿಗೆ ಮದು ಮಗಳೇ ನಾಚುವಂತೆ ಸಿಂಗಾರಗೊಂಡಿದೆ. ಅವಳಿ ನಗರದ ವೃತ್ತಗಳು, ಬೀದಿಗಳು, ರಸ್ತೆಗಳು ಕನ್ನಡ ಭಾವುಟ ಹಾಗೂ ದೀಪಾಲಂಕರಗಳೊಂದಿಗೆ ಝಗಮಗಿಸುತ್ತಿರುವದನ್ನು ಕಂಡರೆ ಮೈಸೂರು ದಸರಾ ಹಾಸುಹೊಕ್ಕಂತಾಗುತ್ತಿದೆ.
ಪ್ರಮುಖ ಬೀದಿಗಳಲ್ಲಿ ಮೆರವಣಿಗೆ: ನವೆಂಬರ 3 ರಂದು ಕನ್ನಡ ಜ್ಯೋತಿಯನ್ನು ಸ್ವೀಕರಿಸಿ ನಗರದ ವೀರನಾರಾಯಣನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ “ನಾಡದೇವತೆ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ, ಮೂಲಕ ಕರ್ನಾಟಕ ಸಂಭ್ರಮ-50” ರ ಮೆರವಣಿಗೆ ಪ್ರಾರಂಭಗೊಳ್ಳುವದು. ಮೆರವಣಿಗೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಹೆಸರಾಂತ ಸಾಂಸ್ಕøತಿಕ ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಯ ಮೆರಗನ್ನು ಇನ್ನಷ್ಟೂ ಹೆಚ್ಚಿಸಲಿವೆ. ಮೆರವಣಿಗೆಯು ವೀರನಾರಾಯಣ ದೇವಸ್ಥಾನದಿಂದ ಪ್ರಾರಂಭವಾಗಿ ಜಾಮಿಯಾ ಮಸಿದಿ, ಬಸವೇಶ್ವರ ವೃತ್ತ, ಕೆ.ಎಚ್.ಪಾಟೀಲ ವೃತ್ತ, ಪಂ.ಪುಟ್ಟರಾಜ ಗವಾಯಿಗಳ ವೃತ್ತ, ಜನರಲ್ ಕಾರಿಯಪ್ಪ ವೃತ್ತದ ಮೂಲಕ ದಿ.ಕಾಟನ್ ಸೇಲ್ ಸೋಸೈಟಿಗೆ ತಲುಪಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮೆರವಣಿಗೆ ಚಾಲನೇ ನೀಡಲಿದ್ದಾರೆ. ಉಪಮುಖ್ಯಮಂತ್ರಿಗಳು, ಸಚಿವರುಗಳು, ಶಾಸಕರುಗಳು, ಜನಪ್ರತಿನಿಧಿಗಳು ಮೆರವಣಿಗೆಯಲ್ಲಿ ಭಾಗವಹಿಸುವರು. ಐವತ್ತು ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಅವರು ಸ್ಥಾನದಲ್ಲಿ ಸಿದ್ಧರಾಮಯ್ಯನವರು, ಕೆ.ಎಚ್.ಪಾಟೀಲ ಅವರ ಸ್ಥಾನದಲ್ಲಿ ಎಚ್.ಕೆ.ಪಾಟೀಲ ಅವರನ್ನು ಕಾಣುವದು ಕುತೂಹಲದ ಸಂಗತಿಯಾಗಿದೆ.
ವೇದಿಕೆ ಕಾರ್ಯಕ್ರಮ: ಐವತ್ತು ವರ್ಷಗಳ ಹಿಂದೆ ಜರುಗಿದ ಕರ್ನಾಟಕ ನಾಮಕರಣ ಸಂಭ್ರಮೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾದಂತಹ ಗದಗ ನಗರದ ದಿ.ಕಾಟನಸೇಲ್ ಸೋಸೈಟಿ ಆವರಣ ನವೆಂಬರ 3 ರಂದು ಜರುಗಲಿರುವ “ಕರ್ನಾಟಕ ಸಂಭ್ರಮ-50” ರ ಕಾರ್ಯಕ್ರಮಕ್ಕೆ ಮತ್ತೋಮ್ಮೆ ಸಾಕ್ಷಿಯಾಗಲಿದೆ. ಸೊಸೈಟಿ ಆವರಣದಲ್ಲಿ ಜರುಗಲಿರುವ ಬೃಹತ ವೇದಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ನಾಮಕರಣ ಮಹೋತ್ಸವ ಪುಸ್ತಕ ಬಿಡುಗಡೆ, ಕರ್ನಾಟಕ ನಾಮಕರಣ ಅಪರೂಪದ ಭಾವಚಿತ್ರಗಳ ಪ್ರದರ್ಶನ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಹತ್ತು ಜಿಲ್ಲೆಗಳ ಗ್ರಾಮಚರಿತೆ ಕೋಶ ಬಿಡುಗಡೆ, ಗದಗ ಜಿಲ್ಲೆಯ ಪ್ರವಾಸಿ ತಾಣಗಳ ಪ್ರದರ್ಶನಗಳು ನಡೆಯಲಿವೆ.