ಕರ್ನಾಟಕ ನಾಮಕರಣಕ್ಕೆ 50ರ ಸುವರ್ಣ ಸಂಭ್ರಮಕ್ಕೆ ನ.೩ ರಂದು ಸಿಎಂ ಸಿದ್ದರಾಮಯ್ಯ ಚಾಲನೆ 

ಸಮಗ್ರ ಪ್ರಭ ಸುದ್ದಿ
2 Min Read
ಕರ್ನಾಟಕ ಸಂಭ್ರಮ-50ರ ಗದಗ ಕಾರ್ಯಕ್ರಮದ ಪ್ರಚಾರದ ಬ್ಯಾನರ, ಪೋಸ್ಟರಗಳನ್ನು ಬಿಡುಗಡೆ.

ಗದಗ  : ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡು 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಸುವರ್ಣ ಸಂಭ್ರಮದ ಕಾರ್ಯಕ್ರಮವನ್ನು ನವೆಂಬರ 3 ರಂದು ಅಭೂತಪೂರ್ವವಾಗಿ ಆಯೋಜಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಹೇಳಿದರು.

ನಗರದಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ಸಾಯಂಕಾಲ ಜರುಗಿದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ನಾಮಕರಣಕ್ಕೆ 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಕರ್ನಾಟಕ ಸಂಭ್ರಮ-50 ಆಚರಿಸಲಾಗುತ್ತಿದೆ. 50 ವರ್ಷಗಳ ಹಿಂದೆ ಗದಗ ನಗರದ ಕಾಟನ ಸೇಲ್ ಸೋಸೈಯಟಿ ಆವರಣದಲ್ಲಿ ಜರುಗಿದ ಐತಿಹಾಸಿಕ ಸಮಾವೇಶವನ್ನು ಮೆಲುಕು ಹಾಕುವದರ ಜೊತೆಗೆ ಸ್ವರ್ಣ ಮಹೋತ್ಸವ ಆಚರಣೆ ಮರುಕಳಿಸುವಂತೆ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಸಿಎಂ ಚಾಲನೆ: 

ಜಿಲ್ಲೆಯಲ್ಲಿ ನವೆಂಬರ 3 ರಂದು ಜರುಗಲಿರುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಹಂಪಿಯಿಂದ ಗೋಲ್ಡನ್ ಚಾರಿಯೆಟ್ ರೈಲಿನ ಮೂಲಕ ಮುಖ್ಯಮಂತ್ರಿಗಳು ಗದುಗಿಗೆ ಆಗಮಿಸಿ ವೀರನಾರಾಯಣ ದೇವಸ್ಥಾನದಲ್ಲಿ ಕರ್ನಾಟಕ ಜ್ಯೋತಿಗೆ ಸ್ವಾಗತಿಸುವರು ನಂತರ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಕಲಾ ತಂಡಗಳ ಹಾಗೂ ರೂಪಕಗಳಿಗೆ ಚಾಲನೆ ನೀಡುವರು.

ವೀರನಾರಾಯಣ ದೇವಸ್ಥಾನದಿಂದ ಹೊರಡುವ ಮೆರವಣಿಗೆಯಲ್ಲಿ ರಾಜ್ಯ ಹಾಗೂ ಸ್ಥಳೀಯ ಕಲಾ ತಂಡಗಳು ಪಾಲ್ಗೊಳ್ಳಲಿದದು ಮಾನ್ಯ ಮುಖ್ಯ ಮಂತ್ರಿಗಳನ್ನು ಭವ್ಯ ಮೆರವಣಿಗೆ ಮೂಲಕ ಕಾಟನ ಸೇಲ್ ಸೊಸೈಟಿ ಆವರಣದಲ್ಲಿ ಜರಗುವ ವೇದಿಕೆಗೆ ಕರೆತರಲಾಗುವದು. ನಂತರ ವೇದಿಕೆ ಕಾರ್ಯಕ್ರಮ ಅದ್ಧೂರಿಯಾಗಿ ಎರ್ಪಡಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು. ಸಮಾರಂಭದ ಸ್ಥಳದಲ್ಲಿ ಐವತ್ತು ವರ್ಷ ಹಳೆಯ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದ್ದು. ಸಾರ್ವಜನಿಕರು, ಯುವ ಜನತೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇತಿಹಾಸವನ್ನು ಅರಿತುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.

ನಗರದಲ್ಲಿ ಮೂರು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು: 

ನವೆಂಬರ 1 ರಂದು ಕರ್ನಾಟಕ ರಾಜ್ಯೋತ್ಸವ ಕೆ.ಹೆಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಾಟನ ಸೇಲ್ ಸೋಸೈಟಿ ಆವರಣದಲ್ಲಿನ ಬೃಹತ ವೇದಿಕೆಯಲ್ಲಿ ಆಯೋಜಿಸಲಾಗುತ್ತಿದೆ. ಅದೇ ರೀತಿ ನವೆಂಬರ 2 ಹಾಗೂ 3 ರಂದು ಸಾಯಂಕಾಲ ರಾಜ್ಯ ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.

ನವೆಂಬರ 3 ರ ಐತಿಹಾಸಿಕ ದಿನದಂದು 450 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ಶಾಲಾ ಕಟ್ಟಡ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಉದ್ಘಾಟಿಸುವರು ಎಂದು ಸಚಿವರ ಎಚ್.ಕೆ.ಪಾಟೀಲ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಪ್ರವಾಸೋಧ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ, ವಾರ್ತಾಧಿಕಾರಿ ವಸಂತ ಮಡ್ಲೂರ ಉಪಸ್ಥಿತರಿದ್ದರು.

Share this Article