ಬೆಂಗಳೂರು: ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 100 ನೂತನ ಕರ್ನಾಟಕ ಸಾರಿಗೆ, 40 ಹವಾ ನಿಯಂತ್ರಣ ರಹಿತ ಸ್ಲೀಪರ್ (ಪಲ್ಲಕ್ಕಿ) ಬಸ್ಸುಗಳು ಹಾಗೂ ಪಾಯಿಂಟ್ ಟು ಪಾಯಿಂಟ್ ಕಾರ್ಯಾಚರಣೆಗೆ ನೂತನ ಮಾದರಿಯ ಮೇಲ್ದರ್ಜೆಗೇರಿಸಿದ ಕರ್ನಾಟಕ ಸಾರಿಗೆ ಬಸ್ಸುಗಳಿಗೆ ಚಾಲನೆ ನೀಡಿದರು.
‘ಪಲ್ಲಕ್ಕಿ’ ಎಂದು ಹೆಸರಿಸಲಾಗಿರುವ ಸ್ಲೀಪರ್ ಬಸ್‌ಗಳು ಅಂತರರಾಜ್ಯಗಳಿಗೆ ಹಾಗೂ ರಾಜ್ಯದ ಪ್ರಮುಖ ನಗರಗಳ ನಡುವೆ ಸಂಚರಿಸಲಿವೆ.
ಪ್ರಸ್ತುತ ಕರ್ನಾಟಕದ ನಾಲ್ಕು ಬಸ್ ಘಟಕಗಳು ರಾಜ್ಯದಾದ್ಯಂತ 23,989 ಬಸ್‌ಗಳನ್ನು ನಿರ್ವಹಿಸುತ್ತವೆ. ದಿನಕ್ಕೆ ಸರಾಸರಿ 65.02 ಲಕ್ಷ ಕಿಲೋಮೀಟರ್ ಓಡುತ್ತವೆ.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ‘ಶಕ್ತಿ’ ಯೋಜನೆಯನ್ನು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಬಸ್‌ಗಳಿಗೆ ಹೆಚ್ಚು ಬೇಡಿಕೆ ಇದೆ. ಬಸ್‌ಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ನೂರಾರು ಹೊಸ ಬಸ್‌ಗಳಿಗೆ ಚಾಲನೆ ನೀಡಲು ಸರ್ಕಾರ ಮುಂದಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಈಗ ಬಿಡುಗಡೆಯಾಗಿರುವ ನಲವತ್ತು ಪಲ್ಲಕ್ಕಿ ಬಸ್‌ಗಳಲ್ಲಿ ಮೂವತ್ತು ಬಸ್‌ಗಳು ಕರ್ನಾಟಕದಲ್ಲಿಯೇ ಸಂಚಾರ ನಡೆಸಲಿವೆ. ಉಳಿದ ಹತ್ತು ಬಸ್‌ಗಳು ಬೇರೆ ರಾಜ್ಯಗಳಿಗೆ ತೆರಳಿವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊಸ ಪಲ್ಲಕ್ಕಿ ಬಸ್‌ಗಳ ವೈಶಿಷ್ಟ್ಯ ತಿಳಿಯಿರಿ
– ಈ ಬಸ್‌ಗಳು 11.3 ಮೀಟರ್ ಉದ್ದವಾಗಿವೆ
– ಎಚ್ಪಿ ಕಂಪನಿಯ ಬಿಎಸ್-6 ತಂತ್ರಜ್ಞಾನವನ್ನು ಬಳಸಿ ಇಂಜಿನ್ ತಯಾರಿಸಲಾಗಿದೆ
– ಇವುಗಳಲ್ಲಿ 28 ಹೈಟೆಕ್ ಸ್ಲೀಪರ್ ಬರ್ತ್ ಸೀಟುಗಳು ಇವೆ
– ಪ್ರತಿ ಆಸನಕ್ಕೂ ಮೊಬೈಲ್ ಸ್ಟ್ಯಾಂಡ್‌ಗಳಿವೆ
– ಮೊಬೈಲ್ ಮತ್ತು ಲ್ಯಾಪ್‌ಟಾಪ್ ಚಾರ್ಜಿಂಗ್ ಸೌಲಭ್ಯಗಳನ್ನು ಈ ಬಸ್‌ಗಳು ಹೊಂದಿವೆ
– ರಾತ್ರಿ ವೇಳೆ ಸೀಟ್‌ಗಳ ಸಂಖ್ಯೆಗಳನ್ನು ಸುಲಭವಾಗಿ ಗುರುತಿಸಲು ಎಲ್ಇಡಿ ವ್ಯವಸ್ಥೆ ಮಾಡಲಾಗಿದೆ
– ಪ್ರಯಾಣದ ವೇಳೆ ಓದಲು ಸುಧಾರಿತ ಎಲ್ಇಡಿ ಬೆಳಕಿನ ವ್ಯವಸ್ಥೆ ಇದೆ
– ಪ್ರಯಾಣಿಕರ ಮಾಹಿತಿಗಾಗಿ ಆಡಿಯೋ ರಿಸೀವರ್‌ಗಳನ್ನು ಅಳವಡಿಸಲಾಗಿದೆ
– ಪಲ್ಲಕ್ಕಿ ಬಸ್‌ಗಳಲ್ಲಿ ಡಿಜಿಟಲ್ ಗಡಿಯಾರ ಮತ್ತು ಎಲ್ಇಡಿ ನೆಲಹಾಸಿನ ವ್ಯವಸ್ಥೆಯನ್ನು ಅಳವಡಿಸಲಾಗಿದೆ
– ಚಪ್ಪಲಿ ಅಥವಾ ಬೂಟ್‌ಗಳನ್ನು ಇಡಲು ಪ್ರತಿ ಪ್ರಯಾಣಿಕರಿಗೆ ಅನುಕೂಲಕರ ಸ್ಥಳವನ್ನು ಕಲ್ಪಿಸಲಾಗಿದೆ
– ಪ್ರತಿ ಸ್ಲೀಪರ್ ಸೀಟುಗಳಲ್ಲಿ ದಿಂಬಿನ ವ್ಯವಸ್ಥೆ ಮಾಡಲಾಗಿದೆ
– ಚಾಲಕನಿಗೆ ಸಹಾಯ ಮಾಡಲು ಬಸ್‌ನ ಹಿಂಭಾಗದಲ್ಲಿ ಹೈಟೆಕ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.