ಗದಗ : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆ ಕೊರತೆಯಿಂದಾಗಿ ಗದಗ ಜಿಲ್ಲೆಯಲ್ಲಿ ಅಧಿಕ ಪ್ರಮಾಣದ ಬೆಳೆ ನಷ್ಟವಾಗಿದ್ದು ಈ ಹಿನ್ನಲೆಯಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಗದಗ ತಾಲೂಕುಗಳಲ್ಲಿ ಮಳೆ ಕೊರತೆಯಿಂದಾಗಿ ನಷ್ಟವಾದಂತಹ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
ಕ್ಷೇತ್ರ ಭೇಟಿಗೂ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಬರದ ವಸ್ತು ಸ್ಥಿತಿ ಬಗ್ಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ಅವರು ಕೇಂದ್ರ ಬರ ಅಧ್ಯಯನ ತಂಡಕ್ಕೆ ವಿವಿರಣೆ ನೀಡಿದರು. ಗದಗ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಮಳೆ ಕೊರತೆಯಾಗಿದೆ. ಇದರಿಂದಾಗಿ ಮಳೆಯನ್ನೇ ನೆಚ್ಚಿಕೊಂಡ ರೈತರ ಪರಿಸ್ಥಿತಿ ಅದೋಗತಿಗೆ ತಲುಪಿದೆ ಎಂದರು.
ಜೂನನಿಂದ ಸೆಪ್ಟೆಂಬರ ವರೆಗೆ ನೈರುತ್ಯ ಮುಂಗಾರು ಮಳೆಯು ವಾಡಿಕೆ ಮಳೆ 372 ಮೀ.ಮೀ ಆಗಬೇಕಿತ್ತು ಆದರೆ ವಾಡಿಕೆ ಮಳೆ ಆಗದೇ ಇರುವದರಿಂದ ಬರಗಾಲ ಆವರಿಸಿದೆ. ಜಿಲ್ಲೆಯಲ್ಲಿ ಜೂನ ಮಾಹೆಯಲ್ಲಿ ಶೇ.54 ರಷ್ಟು ಹಾಗೂ ಅಗಸ್ಟನಲ್ಲಿ ಶೇ.62 ರಷ್ಟು ಮಳೆ ಕೊರತೆಯಾಗಿದ್ದು ಬರಗಾಲ ಸಂಪೂರ್ಣವಾಗಿ ಆವರಿಸಿದಂತಾಗಿದೆ. ಗದಗ ಜಿಲ್ಲೆಯ 7 ತಾಲೂಕುಗಳ ಪೈಕಿ ಮುಂಡರಗಿ ಹೊರತು ಪಡಿಸಿ ಉಳಿದ ಆರು ತಾಲೂಕುಗಳನ್ನು ಸಹ ರಾಜ್ಯ ಸರ್ಕಾರ ಈಗಾಗಲೇ ತೀವ್ರ ಬರ ಪೀಡಿತ ತಾಲೂಕುಗಳೆಂದು ಘೋಷಿಸಿದೆ.
ಜಿಲ್ಲೆಯ ಆರು ತಾಲೂಕುಗಳಲ್ಲಿ ಒಟ್ಟಾರೆ 62,132 ಹೆಕ್ಟೆರ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಯನ್ನು ಬಿತ್ತನೆ ಮಾಡುವ ಮೂಲಕ ಶೇ.89.88ರಷ್ಟು ಬಿತ್ತನೆ ಮಾಡಲಾಗಿತ್ತು. ಇದರಲ್ಲಿ 21,337 ಹೆಕ್ಟೆರ ಈರುಳ್ಳಿ, 40,350 ಹೆ. ಪ್ರದೇಶದಲ್ಲಿ ಮೆನಸಿನಕಾಯಿ, 445 ಹೆಕ್ಟೆರ ಪ್ರದೇಶದಲ್ಲಿ ಟೊಮೆಟೊ ಬಿತ್ತನೆ ಮಾಡಲಾಗಿತ್ತು. ಮಳೆಯ ಅಭಾವದಿಂದಾಗಿ ಈ ಎಲ್ಲ ಬೆಳೆಗಳು ಸಂಪೂರ್ಣ ನೆಲಕಚ್ಚಿದೆ. ಅದರಂತೆ ಆರು ತಾಲೂಕುಗಳ 1.63 ಲಕ್ಷ ಹೆಕ್ಟೆರ ಪ್ರದೇಶದಲ್ಲಿ ಕೃಷಿ ಬೆಳೆ ಬಿತ್ತನೆ ಮಾಡಲಾಗಿತ್ತು. ಆ ಪೈಕಿ 1.54 ಲಕ್ಷ ಹೆಕ್ಟೆರ ಪ್ರದೇಶದ ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ ಎಂದು ವಿವರಿಸಿದರು.
ರಾಷ್ಟ್ರೀಯ ವಿಪತ್ತಿ ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಯಂತೆ ಗದಗ ಜಿಲ್ಲೆಯಲ್ಲಿ ಒಟ್ಟಾರೆ 21,553.22 ಲಕ್ಷ ರೂ ಮೊತ್ತದ ಬೆಳೆ ಹಾನಿಯಾಗಿದೆ. ಇದರಲ್ಲಿ ಕೃಷಿ ಇಲಾಖೆಯ 16,061.44 ಲಕ್ಷ ರೂ. ಹಾಗೂ ತೋಟಗಾರಿಕೆ ಇಲಾಖೆಯ 5491.78 ಲಕ್ಷ ರೂ. ಬೆಳೆ ಹಾನಿಯಾಗಿದೆ. ಮಳೆಯ ತೀವ್ರ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವು ಸಹ ಕುಸಿದಿರುತ್ತದೆ. ಸೆಪ್ಟೆಂಬರ 15 ರಂದು 7.57 ಮೀಟರನಲ್ಲಿದ್ದ ಅಂತರ್ಜಲ ಸೆಪ್ಟೆಂಬರ ಅಂತ್ಯದ ವೇಳೆಗೆ 10.51 ಮೀಟರ್ ತಲುಪಿದೆ. ಇದರಿಂದ ಜನ ಜಾನುವಾರುಗಳಿಗೆ ನೀರು ಪೂರೈಕೆ ಕಷ್ಟ ಸಾಧ್ಯ ಎಂದರು.
ಪ್ರವಾಸಿ ಮಂದಿರದಲ್ಲಿ ಜರುಗಿದ ಸಭೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರುಗಳಾದ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಹೆಚ್ಚುವರಿ ಸಲಹೆಗಾರರಾದ ಡಿ.ರಾಜಶೇಖರ, ಕೇಂದ್ರ ಪಶುಸಂಗೋಪನಾ ಇಲಾಖೆ ನಿರ್ದೇಶಕ ವ್ಹಿ.ಆರ್.ಠಾಕ್ರೆ, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿ ರಾಮ, ಹಾಗೂ ಕಂದಾಯ ಇಲಾಖೆಯ ರಾಜ್ಯ ವಿಪತ್ತು ನಿರ್ವಹಣೆಯ ನಿರ್ದೇಶಕರಾದ ಕರೀಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಎ.ಎ.ಕಂಬಾಳಿಮಠ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ತಹಶೀಲ್ದಾರರು ಸೇರಿದಂತೆ ವಿವಿಧಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.