ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆಯಿಂದ ಬರಗಾಲ ಆವರಿಸಿರುವುದರಿಂದ ಕೇಂದ್ರ ಉನ್ನತ ಅಧಿಕಾರಿಗಳ ಬರ ಅಧ್ಯಯನ ತಂಡ ರಾಜ್ಯಕ್ಕೆ ನಾಳೆ ಆಗಮಿಸಿದೆ. ಒಟ್ಟು ಮೂರು ತಂಡಗಳಲ್ಲಿ ಆಗಮಿಸುವ ತಂಡವು ಬರಪೀಡಿತ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಭೇಟಿ ಕೊಟ್ಟು ಅಧ್ಯಯನ ನಡೆಸಲಿದೆ.
ಬರ ಅಧ್ಯಯನಕ್ಕೆ ತೆರಳುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿರುವ ಈ ತಂಡವು ಅಗತ್ಯವಾದ ಮಾಹಿತಿಯನ್ನು ಪಡೆಯಲಿದೆ. ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿಯನ್ನು ಪಡೆದುಕೊಂಡು ನಂತರ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ಮೂರು ಅಧಿಕಾರಿಗಳ ತಂಡವು ಮೊದಲ ದಿನ ಒಟ್ಟು 12 ಜಿಲ್ಲೆಗಳಿಗೆ ಭೇಟಿ ಕೊಡಲಿದೆ. ತಂಡದಲ್ಲಿ ಕೃಷಿ, ಎಣ್ಣೆ ಬೀಜಗಳು, ನೀತಿ ಆಯೋಗ ಸೇರಿದಂತೆ ವಿವಿಧ ಕೇಂದ್ರ ಇಲಾಖೆಯ ಅಧಿಕಾರಿಗಳು ಆಗಮಿಸಲಿದ್ದಾರೆ. ಈ ಅಧಿಕಾರಿಗಳಿಗೆ ರಾಜ್ಯದ ಕೃಷಿ, ಕಂದಾಯ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಆಯಾ ಜಿಲ್ಲಾಧಿಕಾರಿಗಳು, ಸಿಇಒಗಳು, ಕೆಎಸ್‍ಎಂಡಿ ಎಂಸಿ, ತಹಸೀಲ್ದಾರ್ ಸೇರಿದಂತೆ ಮತ್ತಿತರರು ಅಗತ್ಯ ಮಾಹಿತಿಯನ್ನು ಒದಗಿಸಲಿದ್ದಾರೆ.
ಗುರುವಾರದಿಂದ ಇದೇ 9ರವರೆಗೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಲಿರುವ ತಂಡ ಕೆಲವು ಕಡೆ ರೈತರಿಂದಲೂ ಮಾಹಿತಿ ಪಡೆಯಲಿದೆ. ರೈತರ ಜಮೀನುಗಳಿಗೆ ಖುದ್ದು ಭೇಟಿ ಕೊಡಬೇಕೆಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.
ತಂಡ 1: ಅಜಿತ್‍ಕುಮಾರ್ ಸುಹು, ಡಾ.ಕೆ.ಪೊನ್ನುಸ್ವಾಮಿ
ಮಹೇಂದ್ರ ಚಾಂಡಿಲಿಯ, ಶಿವಚಂದನ್ ಮೀನಾ, ವೈ.ಎಸ್.ಪಾಟೀಲ್
ಭೇಟಿ ಕೊಡುವ ಸ್ಥಳ- ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಧಾರವಾಡ
2ನೇ ತಂಡ:ಡಿ.ರಾಜಶೇಖರ್, ವಿ.ಆರ್.ಠಾಕ್ರೆ, ಮೋಟಿ ರಾಮ್,ಕರೆಗೌಡ
ಭೇಟಿ ಕೊಡುವ ಸ್ಥಳ : ಗದಗ, ಕೊಪ್ಪಳ, ಬಳ್ಳಾರಿ, ವಿಜಯನಗರ
3ನೇ ತಂಡ: ಅಶೋಕ್ ಕುಮಾರ್, ಕರಣ್ ಚೌಧರಿ, ಸಂಗೀತ್ ಕುಮಾರ್, ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ
ಭೇಟಿ ಕೊಡುವ ಸ್ಥಳ: ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆ, ಬೆಂಗಳೂರು ಗ್ರಾಮಾಂತರ. ಜಿಲ್ಲೆಗಳಿಗೆ ಭೇಟಿ ನೀಡುವರು.