ಗದಗ : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಜಗತ್ತು ಕಂಡ ಅಪರೂಪದ ಶ್ರೇಷ್ಟ ವ್ಯಕ್ತಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.
ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ದಲ್ಲಿ ಸೋಮವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಲಾಗಿದ್ದ ಮಹಾತ್ಮಾ ಗಾಂಧೀಜಿಯವರ 154 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಾತ್ಮಾ ಗಾಂಧೀಜಿ ಮತ್ತು ಲಾಲ್‍ಬಹದ್ದೂರ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧೀಜಿಯವರು ಸತ್ಯ, ಪ್ರೇಮ, ಅಹಿಂಸೆ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಸತ್ಯಾಗ್ರಹ ಹಾಗೂ ಅಸಹಕಾರ ಚಳುವಳಿಗಳು ಅವರ ಹೋರಾಟದ ಅಸ್ತ್ರಗಳಾಗಿದ್ದವು. ಸುಧೀರ್ಘವಾದ ಹೋರಾಟದ ನಂತರ ನಮ್ಮ ದೇಶಕ್ಕೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ದೇಶದ ಜನರ ಕಲ್ಯಾಣಕ್ಕಾಗಿ ಹಲವಾರು ಹೋರಾಟಗಳನ್ನು ಮಾಡಿದ್ದಾರೆ. ಜಾತೀಯತೆ, ಅಸ್ಪøಶ್ಯತೆ, ಬ್ರಷ್ಟಾಚಾರ ನಿರ್ಮೂಲನೆ, ಗೋರಕ್ಷಣೆ ಮಾಡಲು ಹಲವಾರು ಹೋರಾಟಗಳನ್ನು ದೇಶದ ಒಳಿತಿಗಾಗಿ ಮಾಡಿದ್ದಾರೆ. ಸ್ವಾತಂತ್ರ್ಯ ಸಿಕ್ಕ ನಂತರ ಭಾರತ ದೇಶವನ್ನು ರಾಮರಾಜ್ಯವನ್ನಾಗಿ ಮಾಡುವ ಕನಸು ಗಾಂಧೀಜಿಯವರು ಹೊಂದಿದ್ದರು. ಇಂದಿನ ನಾಯಕರು, ಅಧಿಕಾರಿಗಳು ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಸಂಪೂರ್ಣವಾಗಿ ರಾಮರಾಜ್ಯ ಮಾಡಲು ಆಗಿದೆಯೇ ಅಥವಾ ಇಲ್ಲವೋ ಎನ್ನುವ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗಿದೆ ಎಂದರು.
ಲಾಲ್ ಬಹದ್ದೂರ ಶಾಸ್ತ್ರೀಜಿಯವರು ಬಡ ಕುಟುಂಬದಲ್ಲಿ ಹುಟ್ಟಿದರು. ಲಾಲ್‍ಬಹದ್ದೂರ ಶಾಸ್ತ್ರೀಯವರು ಎರಡು ವರ್ಷಗಳ ಕಾಲ ಪ್ರಧಾನಿಯಾಗಿ ದೇಶಕ್ಕೆ ಸುಭದ್ರ, ಆಡಳಿತ ಒದಗಿಸಿ ಕೊಟ್ಟವರಾಗಿದ್ದಾರೆ. ಅವರ ಆಡಳಿತಾವಧಿಯ ಸಂದರ್ಭದಲ್ಲಿ ಇಂಡೋ ಪಾಕ್ ಯುದ್ದವಾದಾಗ ಭಾರತವು ಜಯ ಗಳಿಸಿತು. ಅವರ ಕರ್ತವ್ಯ ನಿಷ್ಟೆ, ಪ್ರಾಮಾಣಿಕತನ, ನಿರ್ಭಯತೆ ಎಲ್ಲರಿಗೂ ಆದರ್ಶಪ್ರಾಯವಾಗಿವೆ. ಲಾಲ್ ಬಹದ್ದೂರ ಶಾಸ್ತ್ರೀಜಿಯವರ ಪ್ರಾಮಾಣಿಕತನ, ಅವರ ವ್ಯಕ್ತಿತ್ವ ಎಲ್ಲರಿಗೂ ಅನುಕರಣೀಯವಾಗಿದೆ. ತಮಗಾಗಿ ಮತ್ತು ತಮ್ಮ ಕುಟುಂಬಕ್ಕಾಗಿ ಬದುಕದೇ ಸಮಾಜಕ್ಕಾಗಿ ಬದುಕಿದಂತಹ ಮಹನೀಯರ ಜಯಂತಿಯನ್ನು ಈ ಸಂದರ್ಭದಲ್ಲಿ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಇಂದಿನ ವಿಧ್ಯಾರ್ಥಿಗಳು ಗಾಂಧೀಜಿ ಹಾಗೂ ಲಾಲಬಹದ್ದೂರ ಶಾಸ್ತ್ರಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಹುಲಕೋಟಿ ಸಹಕಾರಿ ರೇಡಿಯೋ ನಿರ್ದೇಶಕರಾದ ಜೆ.ಕೆ.ಜಮಾದಾರ ಅವರು ಮಾತನಾಡಿ ಮಹಾತ್ಮಾ ಗಾಂಧೀಜಿಯವರು ಶತಮಾನದ ಶ್ರೇಷ್ಠೋತ್ತಮ ಮಾನವಾರಾಗಿದ್ದಾರೆ. ಗಾಂಧೀಜಿಯವರೆಂದರೆ ಅಂತರಾಷ್ಟ್ರೀಯ ಭಾವೈಕ್ಯತೆಯ ಸಂಕೇತ. ಗಾಂಧೀಜಿಯವರನ್ನು ಯುಗ ದೇವ ಎಂದು ಕೆಲವು ತಜ್ಞರು ಕರೆದಿದ್ದಾರೆ.
ಗಾಂಧೀಜಿಯವರು ಚರ್ಚೆ ಮಾಡುವ ವ್ಯಕ್ತಿಯಲ್ಲ ಅದರ ಬದಲಾಗಿ ಹೃದಯದಲ್ಲಿಟ್ಟು ಧ್ಯಾನಿಸುವ ವ್ಯಕ್ತಿಯಾಗಿದ್ದಾರೆ. ಮಾನವೀಯ ಮೌಲ್ಯಗಳ ಸಂಗ್ರಹವೇ ಗಾಂಧೀಜಿಯಾಗಿದ್ದಾರೆ. ಗಾಂಧೀಜಿಯವರ ಬಗ್ಗೆ ಪ್ರಕಟವಾಗಿರುವ ಸಾಹಿತ್ಯ 450 ಕ್ಕೂ ಹೆಚ್ಚು ಜೀವನ ಚರಿತ್ರೆಗಳು ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟವಾಗಿವೆ. ಒಟ್ಟು 32,000 ಪುಸ್ತಕಗಳು ಪ್ರಕಟವಾಗಿವೆ. 260 ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಗಾಂಧೀಜಿಯವರ ಕುರಿತು ಸಂಶೋಧನಾ ಕೇಂದ್ರಗಳಿವೆ. ಹಲವಾರು ಜನ ನೋಬಲ್ ಪ್ರಶಸ್ತಿ ವಿಜೇತರೂ ಸಹ ಗಾಂಧೀಜಿಯವರ ರಾಜಕೀಯ ವಿಚಾರಗಳನ್ನು ಅನುಸರಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಅವರ ತತ್ವಗಳು ಸಮಾಜದಲ್ಲಿ ಕತ್ತಲೆಗೆ ದೀವಟಿಗೆಯಾಗಿ ಕೆಲಸ ಮಾಡುತ್ತವೆ. ವಿಜ್ಞಾನಿ ಅಲ್ಬರ್ಟ ಐನ್‍ಸ್ಟೀನ್ ಅವರ ಪ್ರಕಾರ ಗಾಂಧೀಜಿಯವರು ನೆಲದ ಮೇಲೆ ನಡೆದಾಡುವ ಮಾನವರಲ್ಲ. ದೇವತಾ ಮಾನವ ಎಂದು ಬಣ್ಣಿಸಿದ್ದಾರೆ. ಅವರು ನಮ್ಮ ದೇಶಕ್ಕೆ ಸತ್ಯ, ಅಹಿಂಸೆ ಮೂಲಕ ಸ್ವಾತಂತ್ರ್ಯತಂದುಕೊಟ್ಟವರು. ಅವರ ತತ್ವಗಳ ಮೂಲಕ ವಿಶ್ವದ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಅನೇಕ ವಿಶ್ವ ನಾಯಕರು ಹೇಳಿದ್ದಾರೆ. ಅನೇಕ ಇತಿಹಾಸಕಾರರೂ, ನೀತಿಜ್ಞರು, ನಾಯಕರು ಗಾಂಧೀಜಿಯವರು ಸಹನೆಯ ಪ್ರತಿಮೂರ್ತಿ ಎಂದು ವರ್ಣಿಸಿದ್ದಾರೆ ಎಂದು ತಿಳಿಸಿದರು.
ಲಾಲ ಬಹದ್ದೂರ ಶಾಸ್ತ್ರೀಜಿಯವರು ಬಡ ಕುಟುಂಬದಲ್ಲಿ ಜನಿಸಿದವರು. ಮೊಗಲಸಾರಾಯಿ ಎಂಬಲ್ಲಿ ಶಾರದಾ ಪ್ರಸಾದ ಶ್ರೀವಾತ್ಸವ ಹಾಗೂ ರಾಮದುಲಾರಿಯವರ ಮಗನಾಗಿ ಹುಟ್ಟಿದರು. ವಿದ್ಯಾಪೀಠದಿಂದ ಇವರಿಗೆ ಶಾಸ್ತ್ರೀ ಎಂಬ ಪದವಿ ಬಂದಿತು. ಶಾಸ್ತ್ರೀಜಿಯವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಲಾಲಬಹದ್ದೂರ ಶಾಸ್ತ್ರೀಜಿಯವರು ರೇಲ್ವೆ ಮಂತ್ರಿಯಾಗಿದ್ದಾಗ ಒಮ್ಮೆ ರೇಲ್ವೆ ಅಪಘಾತ ಸಂಭವಿಸಿದಾಗ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಶಾಸ್ತ್ರೀಜಿಯವರು ಸತ್ಯ, ನಿಷ್ಟೆ, ಪ್ರಾಮಾಣಿಕತನದಿಂದ ಆಡಳಿತ ನಡೆಸಿದವರು. ಇಂಡೋ ಪಾಕ್ ಯುದ್ದವಾದಾಗ ಭಾರತ ದೇಶವು ಜಯ ಗಳಿಸಿತು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಜರುಗಿದ ಸರ್ವಧರ್ಮ ಪ್ರಾರ್ಥನೆಯಲ್ಲಿ ಸುಮನ್ ಕುಲಕರ್ಣಿ ಭಗವದ್ಗೀತೆ ಅಧ್ಯಾಯವನ್ನು ಪಠಿಸಿದರು. ಕುಮಾರಿ ಮುಸ್ಕಾನ್ ಕುರಾನ್ ಅನ್ನು ಮತ್ತು ಕುಮಾರಿ ಸವಿನಯ ಬೈಬಲ್ ಅನ್ನು ಪಠಿಸಿದರು. ವೆಂಕಟೇಶ ಅಲ್ಕೋಡ ಹಾಗೂ ಉಷಾ ಕಾರಂತ ಅವರು ಭಜನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಗಾಂಧೀಜಿಯವರ ಜಯಂತಿ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಪ್ರೌಢಶಾಲಾ, ಪದವಿ ಪೂರ್ವ ಶಿಕ್ಷಣ, ಪದವಿ/ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ಅವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿ ಕೊನೆಗೆ ವಂದಿಸಿದರು.