ಬೆಂಗಳೂರು: ಯುವಜನತೆ ಮತ್ತು ಮಕ್ಕಳ ಆರೋಗ್ಯದ ಮೇಲೆ ದುಷ್ಟಾರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಾಂತ ಹುಕ್ಕಾಬಾರ್ ನಿಷೇಧಿಸಿಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ವಿಕಾಸಸೌಧದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಬಿ. ನಾಗೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹುಕ್ಕಾಬಾರ್ ನಿಷೇದಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಪ್ರಸ್ತುತ ದಿನಗಳಲ್ಲಿ ಯುವಜನತೆ ಮತ್ತು ಮಕ್ಕಳ ಮೇಲೆ ಹುಕ್ಕಾಬಾರ್ ವ್ಯಾಪಕವಾದಿ ಪರಿಣಾಮ ಬೀರುತ್ತಿದೆ. ಇದಕ್ಕೆ ಶಾಶ್ವತವಾದ ಕಡಿವಾಣ ಮಾಡಲು ನಿಷೇಧ ಮಾಡುವುದೇ ನಮ್ಮ ಮುಂದಿರುವ ಏಕೈಕ ಮಾರ್ಗ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಸದೃಢವಾದ ಹೆಜ್ಜೆಯನ್ನಿಟ್ಟಿದೆಯೆಂದು ಹೇಳಿದರು.
ಸಭೆಯಲ್ಲಿ ಹುಕ್ಕಾಬಾರ್ ನಿಷೇಧಿಸುವ ಕುರಿತು ವ್ಯಾಪಕವಾದ ಚರ್ಚೆ ನಡೆಸಿ ಅಕಾರಿಗಳಿಂದ ಸಾಧಕ ಬಾಧಕಗಳ ಬಗ್ಗೆ ಅಭಿಪ್ರಾಯವನ್ನು ಪಡೆದಿದ್ದೇವೆ .ಯಾವುದೇ ಕಾರಣಕ್ಕೂ ಹುಕ್ಕಾಬಾರ್‍ಗೆ ಅವಕಾಶ ಕೊಡಬಾರದೆಂಬ ಚಿಂತನೆ ಮಾಡಿದ್ದೇವೆ ಎಂದರು.
ಈವರೆಗೂ ಹುಕ್ಕಾಬಾರ್ ನಿಷೇಧಿಸಲು ಸಾಧ್ಯವಾಗಿರಲಿಲ್ಲ. ಅದಕ್ಕೆ ನಾವು ನಿಯಂತ್ರಣ ಮಾಡಲು ಮುಂದಾಗಿದ್ದೇವೆ. ಇದನ್ನು ಕಾನೂನಿನ ಮೂಲಕ ನಿಯಂತ್ರಿಸುವ ಅಗತ್ಯವಿದೆ. ಇದನ್ನು ನಿಷೇಧಿಸಲು ಯಾರೂ ಕೂಡ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಕೆಲವರು ನಾವು ಕಾನೂನು ಜಾರಿಗೆ ತಂದ ಬಳಿಕ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತಾರೆ. ಈಗಾಗಿ ನಾವು ಹೊಸ ಮಸೂದೆಯನ್ನು ಜಾರಿಗೆ ಮಾಡುತ್ತೇವೆಂದು ಹೇಳಿದರು.
ಇನ್ನು ಮುಂದೆ ದೇವಸ್ಥಾನ, ಚರ್ಚ್, ಮಸೀದಿ, ಆಸ್ಪತ್ರೆ, ಸುತ್ತಮುತ್ತ ತಂಬಾಕು ವಸ್ತುಗಳನ್ನು ಮಾರಾಟ ಮಾಡುವುದಕ್ಕೆ ನಿಷೇಧ ಹೇರಲು ತೀರ್ಮಾನ ಮಾಡಿದ್ದೇವೆ. ಇಂತಹ ಕಡೆ ಮಾರಾಟಕ್ಕೆ ಅವಕಾಶ ಇರಬಾರದು ಎಂದು ಬಹುದಿನ ಬೇಡಿಕೆಯಾಗಿತ್ತು. ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ತಂಬಾಕು ಮಾರಾಟಕ್ಕೆ ಕಡಿವಾಣ ಹಾಕಲಿದ್ದೇವೆಂದು ವಿವರಿಸಿದರು.
ತಂಬಾಕು ಉತ್ಪನ್ನಗಳನ್ನು ಪ್ರಸ್ತುತ 18 ವರ್ಷ ಮೇಲ್ಪಟ್ಟವರು ಖರೀದಿ ಮಾಡಲು ಈಗಿರುವ ಕಾನೂನಿನಲ್ಲಿ ಅವಕಾಶವಿದೆ. ಇದನ್ನು ಮುಂದಿನ ದಿನಗಳಲ್ಲಿ 21 ವರ್ಷಕ್ಕೆ ಏರಿಕೆ ಮಾಡಲು ಚಿಂತನೆ ಮಾಡಿದ್ದೇವೆ. ಈಗಿರುವ ಕಾನೂನಿಗೆ ತಿದ್ದುಪಡಿ ಮಾಡಬೇಕೆಂದ್ದಿದೇವೆ. ಇದಕ್ಕೂ ಸಹ ವಿಧೇಯಕ ತರಬೇಕಾಗುತ್ತದೆಂದು ವಿವರಿಸಿದರು.
ಯುವಜನ ಕ್ರೀಡಾ ಸಚಿವ ಬಿ ನಾಗೆಂದ್ರ ಮಾತನಾಡಿ, ಹುಕ್ಕಾಬಾರ್ ನಿಷೇಧಿಸುವ ಕುರಿತು ಚರ್ಚೆ ಮಾಡಲಾಗಿದೆ. ಸಭೆಯಲ್ಲಿ ಬಹುತೇಕರು ಇದನ್ನು ನಿಷೇಸಬೇಕೆಂದು ಸಲಹೆ ಕೊಟ್ಟಿದ್ದಾರೆ. ಇದನ್ನು ಕಾನೂನಿನ ಮೂಲಕವೇ ಮಾಡುತ್ತೇವೆಂದರು. ಯುವಜನರ ಹಿತದೃಷ್ಠಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ನಮ್ಮ ನಿರ್ಧಾರದ ಪರಿಣಾಮ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಇದು ಸಂಪೂರ್ಣವಾಗಿ ಯುವಜನತೆ ಮತ್ತು ಮಕ್ಕಳನ್ನು ಗಮನದಲ್ಲಿಟ್ಟುಕೊಂಡ ನಿರ್ಧಾರವಾಗಿದೆ.
ಎಷ್ಟೇ ಒತ್ತಡಗಳಿದ್ದರೂ ಹುಕ್ಕಾಬಾರ್ ನಿಷೇಧ ಮಾಡುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ನಾಗೇಂದ್ರ ಅವರು ಸ್ಪಷ್ಟಪಡಿಸಿದರು.