ಕಾಸರಗೋಡು : ನಿಪಾ ವೈರಸ್‍ಗೆ ಇಬ್ಬರು ಬಲಿಯಾಗಿರುವ ಹಿನ್ನೆಲೆಯಲ್ಲಿ ಕೇರಳದ ಕೋಜಿಕೋಡ್ ಜಿಲ್ಲೆಯ 7 ಗ್ರಾಮ ಪಂಚಾಯಿತಿಗಳನ್ನು ಕಂಟೋನ್ಮೆಂಟ್ ವಲಯಗಳೆಂದು ಘೋಷಣೆ ಮಾಡಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನಿನ್ನೆ ಮಹಾಮಾರಿ ನಿಪಾ ವೈರಸ್‍ಗೆ ಇಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕೋಜಿಕೋಡ್ ಜಿಲ್ಲೆಯ 7 ಗ್ರಾಮ ಪಂಚಾಯಿತಿಗಳನ್ನು ಕಂಟೋನ್ಮೆಂಟ್ ವಲಯಗಳೆಂದು ಘೋಷಿಸಲಾಗಿದೆ. ವೈರಾಣು ಇತರೆ ಭಾಗಗಳಿಗೆ ಹರಡದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇರಳದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಖೆ ಹೇಳಿದೆ.
ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಶಿಶುವಿಹಾರ ಸೇರಿದಂತೆ ಮತ್ತಿತರ ಸಂಸ್ಥೆಗಳನ್ನು ಕೆಲ ದಿನದ ಮಟ್ಟಿಗೆ ಬಂದ್ ಮಾಡಲು ಸೂಚಿಸಲಾಗಿದೆ. 130 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರ ಜೊತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಂಪರ್ಕದಲ್ಲಿರುವವರನ್ನು ತಪಾಸಣೆ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.
ಜಿಲ್ಲೆಯ ಕೆಲವು ಕಡೆ ಕೆಲ ದಿನದ ಮಟ್ಟಿಗೆ ಚಿಕನ್, ಮೊಟ್ಟೆ, ಮೀನು ಸೇರಿದಂತೆ ಇತರೆ ಮಾಂಸಾಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ಸೂಚಿಸಲಾಗಿದೆ. ಹಣ್ಣು-ತರಕಾರಿ, ದಿನಸಿ ವಸ್ತುಗಳು ಸೇರಿದಂತೆ ಮತ್ತಿತರ ಪದಾರ್ಥಗಳನ್ನು ಬಿಸಿನೀರಿನಲ್ಲಿ ಬೇಯಿಸಿ ನಂತರವೇ ಬಳಸಲು ಇಲಾಖೆ ನಿರ್ದೇಶನ ನೀಡಿದೆ.
ಕೇರಳದಲ್ಲಿ ಎರಡು ದಿನಗಳ ಹಿಂದೆ ನಿಫಾ ವೈರಾಣು ಕಾಣಿಸಿಕೊಂಡು ಇಬ್ಬರು ಸಾವನ್ನಪ್ಪಿದ್ದರು. ಪುಣೆಯ ಸಂಶೋಧನಾ ಸಂಸ್ಥೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಇದು ದೃಢಪಟ್ಟಿತ್ತು.ಸದ್ಯ ಕೇರಳದಲ್ಲಿ ಕಾಣಿಸಿಕೊಂಡಿರುವ ನಿಫಾ ವೈರಾಣು ಬಾಂಗ್ಲಾದೇಶದ ರೂಪಾಂತರವಾಗಿದ್ದು, ಇದು ಮನುಷ್ಯನಿಂದ ಮನುಷ್ಯನಿಗೆ ಹರಡಿ ಮುಖ್ಯವಾಗಿ ಮೆದುಳಿಗೆ ಹಾನಿಯುಂಟು ಮಾಡುವ ಸಾಧ್ಯತೆ ಇದೆ ಎಂದು ಕೇರಳ ಸರ್ಕಾರ ಹೇಳಿದೆ.
ಈ ರೂಪಾಂತರವು ಹೆಚ್ಚಿನ ಮರಣ ಪ್ರಮಾಣ ಹೊಂದಿದ್ದು, ಕಡಿಮೆ ಪ್ರಮಾಣದ ಸಾಂಕ್ರಾಮಿಕವಾಗಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.