ಗದಗ:ಭಾರತದ ರಾಷ್ಟ್ರೀಯ ಕ್ರೀಡೆಯಾದ ಹಾಕಿ ಕ್ರೀಡೆಯನ್ನು ಉತ್ತೇಜಿಸಿ ಹಾಕಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಹಾಗೂ ಜಿಲ್ಲೆಯ ಹಾಕಿ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಸದುದ್ದೇಶದೊಂದಿಗೆ ಜಿಲ್ಲೆಯಲ್ಲಿ ಸುಸಜ್ಜಿತ ಮಹಾತ್ಮಾಗಾಂಧಿ ಹಾಕಿ ಮೈದಾನ ಟರ್ಫ ಗ್ರೌಂಡನೊಂದಿಗೆ ನಿರ್ಮಾಣವಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಪ್ರಥಮವಾಗಿ ಮಹಾತ್ಮಾಗಾಂಧಿ ಟರ್ಫ ಹಾಕಿ ಮೈದಾನ ನಿರ್ಮಾಣವಾಗಿದ್ದರಿಂದ ಜಿಲ್ಲೆಯ ಪ್ರತಿಭಾವಂತ ಹಾಕಿ ಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಅದ್ಬುತ ವೇದಿಕೆ ಕಲ್ಪಿಸಿಕೊಟ್ಟಂತಾಗಿದೆ.
9 ಕೋಟಿ ವೆಚ್ಚದಲ್ಲಿ ಹಾಕಿ ಗ್ರೌಂಡ್ ನಿರ್ಮಾಣ:
2016-17ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟಕ ಉಪಯೋಜನೆಯಡಿ ಜಿಲ್ಲೆಯ ಬೆಟಗೇರಿಯ ಗಾಂಧಿ ನಗರದಲ್ಲಿರುವ ಮಹಾತ್ಮಾ ಗಾಂಧಿ ಹಾಕಿ ಕ್ರೀಡಾಂಗಣದ ನಿರ್ಮಾಣ ಕಾಮಗಾರಿ ಪ್ರಾರಂಭವಾಯಿತು.
ಪ್ರಥಮ ಹಂತದ ಕಾಮಗಾರಿಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ರೂ.5.00 ಕೋಟಿ ಮತ್ತು ಹೆಚ್ಚುವರಿಯಾಗಿ ರೂ.1.05 ಕೋಟಿ ಒಟ್ಟು ರೂ.6.05 ಕೋಟಿ ಬಿಡುಗಡೆಯಾಗಿದ್ದು ಅದರಲ್ಲಿ ಫೆವಿಲಿಯನ್ ಕಟ್ಟಡ, ಮೈದಾನ ಸಮತಟ್ಟುಗೊಳಿಸುವಿಕೆ, ಡಾಂಬರಿಕರಣ, ಚೈನ್ ಲಿಂಕ್ ಫೆನ್ಸಿಂಗ್ ಹಾಗೂ ವಿದ್ಯುದ್ದಿಕರಣ ಕೆಲಸಗಳು ಮೊದಲ ಹಂತದಲ್ಲಿ ಪೂರ್ಣಗೊಂಡಿದ್ದವು.
2019 ರಲ್ಲಿ ಎರಡನೇ ಹಂತದ ಕಾಮಗಾರಿಯಲ್ಲಿ 3.18 ಕೋಟಿ ರೂ ಬಿಡುಗಡೆಯಾಗಿ ಅದರಲ್ಲಿ ಸಿಂಥೇಟಿಕ್ ಟರ್ಪ, ನೀರಿನ ವ್ಯವಸ್ಥೆ ಹಾಗೂ ಅಗತ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಕ್ರೀಡಾಂಗಣ ಉದ್ಘಾಟನೆಗೆ ಸಿದ್ದಗೊಳ್ಳಲು ಅಗತ್ಯವಿರುವ ಕಾಮಗಾರಿಗಳನ್ನು 26.00 ಲಕ್ಷಗಳಲ್ಲಿ ನಿರ್ಮಿತಿ ಕೇಂದ್ರ ಗದಗ ಇವರಿಂದ ಪೂರ್ಣಗೊಳಿಸಲಾಗಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಇಲ್ಲಿಯವರೆಗೂ ರೂ.9.49 ಕೋಟಿಗಳನ್ನು ಖರ್ಚು ಮಾಡಲಾಗಿದೆ.
ಹಾಕಿ ಕ್ರೀಡಾಂಗಣ ಅಭಿವೃದ್ಧಿಗೊಳಿಸಲು ವಿವಿಧ ಕಾಮಗಾರಿಗಳಾದ ಡಕೌಟ್, ಗೋಲ್ ಪೋಸ್ಟ್ ಹಿಂದೆ ಪೆನ್ಸಿಂಗ್ ವಿಥ ನೆಟ್ , ಕಂಪೌಂಡ ಗೋಡೆ, ವಾಟರ್ ಟ್ಯಾಂಕ್, ಲ್ಯಾಗಿಂಗ್ ಗಟಾರದ ಮೇಲೆ ( ಸಿಮೆಂಟ್ ) ಪ್ರಾಕ್ಟೀಸ್ ಪಿಚ್, ಕ್ರೀಡಾಂಗಣ ದುರಸ್ತಿ, ಹಳೆಯ ಕಟ್ಟಡ ರಿಪೇರಿ ಸೇರಿದಂತೆ ವಿವಿಧ ಕಾಮಗಾರಿಗಳು ಕೆಲಸವು ಶೀಘ್ರದಲ್ಲಿ ಪ್ರಾರಂಭವಾಗುತ್ತದೆ.
ಲೋಕಾರ್ಪಣೆ : ಸೆಪ್ಟೆಂಬರ್ 3 ರಂದು ಸಂಜೆ 4.30 ಗಂಟೆಗೆ ಗದಗ-ಬೆಟಗೇರಿಯ ಗಾಂಧಿ ನಗರದಲ್ಲಿ ನಿರ್ಮಿಸಲಾದ ಮಹಾತ್ಮಾಗಾಂಧಿ ಹಾಕಿ ಕ್ರೀಡಾಂಗಣವು ಹಾಕಿ ಕ್ರೀಡಾ ಪಟುಗಳಿಗೆ ಲೋಕಾರ್ಪಣೆಯಾಗಿದೆ.
ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಎಚ್.ಸಿ. ಮಹಾದೇವಪ್ಪ, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ನಾಗೇಂದ್ರ ಜೊತೆಗೆ ಹಾಕಿ ಕ್ರೀಡಾಪಟುಗಳಿಂದ ರವಿವಾರ ಲೋಕಾರ್ಪಣೆ ಮಾಡಿದರು.