ನವದೆಹಲಿ: ದೇಶದ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಭಾರತದ ಪ್ರಪ್ರಥಮ ಸೂರ್ಯ ಯೋಜನೆ ಆದಿತ್ಯ-ಎಲ್ 1 ಇಂದು (ಸೆ.02) ಬೆಳಗ್ಗೆ 11.50ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಆಯಿತು.
ಪಿಎಸ್ಎಲ್ವಿ-ಸಿ57 ರಾಕೆಟ್ ಆದಿತ್ಯ-ಎಲ್ 1 ನೌಕೆಯನ್ನು ಹೊತ್ತು ನಭಕ್ಕೆ ಜಿಗಿಯಿತು. ಪ್ರಮುಖ ಮೂರು ಹಂತಗಳನ್ನು ಯಶಸ್ವಿಯಾಗಿ ಮಗಿಸಿದ ನೌಕೆ ಅಂತಿಮವಾಗಿ ಭೂ ಕಕ್ಷೆಯನ್ನು ಯಶಸ್ವಿಯಾಗಿ ತಲುಪುವ ಮೂಲಕ ಉಡಾವಣೆ ಯಶಸ್ವಿಯಾಯಿತು.
ಸೋಲಾರ್ ಅಟ್ಮಾಸ್ಪಿಯರ್ ಅಂದ್ರೆ ಕ್ರೋಮೋಸ್ಪಿಯರ್ ಮತ್ತು ಸೂರ್ಯನ ವಾತಾವರಣದ ಹೊರಭಾಗವಾದ ಕರೊನಾವನ್ನು ಡೀಪ್ ಆಗಿ ಸ್ಟಡಿ ಮಾಡುವುದೇ ಈ ಆದಿತ್ಯ ಎಲ್ 1 ಮಿಷನ್ನ ಒಂದು ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ಆದಿತ್ಯ ಎಲ್ 1ಗೆ 7 ಪೇಲೋಡ್ ಅನ್ನು ಇನ್ಸರ್ಟ್ ಮಾಡಿದ್ದಾರೆ. ಅವುಗಳಲ್ಲಿ ನಾಲ್ಕು ಸೋಲಾರ್ ಸರ್ಫೇಸ್ ಅನ್ನು ಸ್ಟಡಿ ಮಾಡುತ್ತವೆ ಮತ್ತು ಉಳಿದ ಮೂರು ಸೋಲಾರ್ ವಿಂಡ್ಸ್ ಮತ್ತು ಮ್ಯಾಗ್ನೇಟಿಕ್ ಫೀಲ್ಡ್ ಅನ್ನು ಅಧ್ಯಯನ ಮಾಡುತ್ತವೆ.
ಸೂರ್ಯನ ಅಧ್ಯಯನಕ್ಕಾಗಿ ವೀಕ್ಷಣಾಲಯ ಹೊಂದಿರುವ ಭಾರತದ ಪ್ರಥಮ ಬಾಹ್ಯಾಕಾಶ ಯೋಜನೆ ಇದಾಗಿದೆ. ನೇಸರನ ಪ್ರಭಾವಲಯವಾದ ಕೊರೊನಾವನ್ನು ವೀಕ್ಷಿಸುವಂತೆ ಆದಿತ್ಯ ನೌಕೆಯನ್ನು ವಿನ್ಯಾಸಗೊಳಿಸಲಾಗಿದೆ. ಸೌರ ಮಾರುತವನ್ನು ವೀಕ್ಷಿಸುವ ಇನ್-ಸಿಟು ವ್ಯವಸ್ಥೆಯೂ ಇದರಲ್ಲಿದೆ. ಭೂಮಿಯಿಂದ 15 ಲಕ್ಷ ಕಿಲೋ ಮೀಟರ್ ದೂರದ ವರೆಗೆ ಈ ನೌಕೆ ಕ್ರಮಿಸಲಿದೆ. ಬಳಿಕ ಸೂರ್ಯನ ಕಡೆಗೆ ನಿರ್ದೇಶಿಸಲ್ಪಡುತ್ತದೆ. ಇದು ಭೂಮಿ-ಸೂರ್ಯನ ದೂರದ ಸುಮಾರು 1% ಆಗಿದೆ. ಆದಿತ್ಯ-L1 ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡುತ್ತದೆ. ಆದರೆ, ಸೂರ್ಯನ ಮೇಲೆ ಇಳಿಯುವುದಿಲ್ಲ ಅಥವಾ ಸೂರ್ಯನನ್ನು ಸಮೀಪಿಸುವುದಿಲ್ಲ.