ನವದೆಹಲಿ : ದೇಶದಾದ್ಯಂತ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ ಮಂಡನೆಯ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸಮಿತಿ ರಚಿಸಿದೆ. ಈ ಸಮಿತಿಯಲ್ಲಿ ಸುಪ್ರೀಂಕೋರ್ಟ್‍ನ ಇಬ್ಬರು ನಿವೃತ್ತ ನ್ಯಾಯಾಧೀಶರು ಕಾನೂನು ಇಲಾಖೆಯ ಕಾರ್ಯದರ್ಶಿ ಸೇರಿದಂತೆ ಮೊದಲಾದವರಿದ್ದು, ಸಮಿತಿಯು ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವ ಕಾರ್ಯಸಾಧ್ಯತೆ ಕುರಿತು ವರದಿ ಸಲ್ಲಿಸಲಿದೆ.
ದೆಹಲಿಯ ಜಿ-20 ಶೃಂಗಸಭೆಯ ನಂತರ ವಿಶೇಷ ಅಧಿವೇಶನ ನಡೆಯಲಿದ್ದು, ಇದರ ನಡುವೆಯೇ ಕೇಂದ್ರ ಸರ್ಕಾರ ರಚಿಸಿದೆ. ಸಮಿತಿಯ ಸದಸ್ಯರ ಕುರಿತು ಅಸೂಚನೆಯನ್ನು ನಂತರ ಹೊರಡಿಸಲಾಗುವುದು. ಸೆ.18ರಿಂದ ಸೆ.22ರವರೆಗೆ ವಿಶೇಷ ಸಂಸತ್ ಅಧಿವೇಶನ ನಡೆಯಲಿದ್ದು, ಹಲವು ಮಸೂದೆಯನ್ನು ಮಂಡಿಸಲು ಬಾಕಿ ಇರುವ ಕಾರಣ ಈ ವಿಶೇಷ ಅವೇಶವನ್ನು ಕರೆಯಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಈ ವಿಶೇಷ ಅವೇಶನದ ಶಾಸಕಾಂಗ ಕಾರ್ಯಸೂಚಿಯ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಈ ಅಧಿವೇಶ ಮುಂದಿನ ಸಾರ್ವತ್ರಿಕ ಚುನಾವಣೆಗಳಿಗೆ ಬಲವಾದ ರಾಜಕೀಯ ಸಂದೇಶವನ್ನು ನೀಡುವಂತಿದೆ ಎಂದು ಹೇಳಲಾಗಿದೆ.
ಇನ್ನು ಈಗಾಗಲೇ ಚರ್ಚೆಯಲ್ಲಿರುವ ಒಂದು ರಾಷ್ಟ್ರ-ಒಂದು ಚುನಾವಣೆ ಮಸೂದೆಯು ಸ್ವಲ್ಪ ಸಮಯದವರೆಗೆ ಸರ್ಕಾರದ ಕಾರ್ಯಸೂಚಿಯಲ್ಲಿರಲಿದೆ. ಕೇಂದ್ರ ಸರ್ಕಾರವು ಸೆಪ್ಟೆಂಬರ್ 18 ರಿಂದ 22 ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅವಕಾಶ ನೀಡುತ್ತದೆ ಎಂದು ಹೇಳಲಾಗಿದೆ. ಇದೀಗ ಈ ಬಗ್ಗೆ ರಾಜ್ಯ ಮತ್ತು ಇತರ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವ ರೀತಿಯ ಅಭಿಪ್ರಾಯ ಇದೆ ಜತೆಗೆ ಕೇಂದ್ರದ ಈ ನಿಲುವಿನ ಬಗ್ಗೆ ಪಕ್ಷಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಯಾವ ರೀತಿಯಲ್ಲಿ ಚರ್ಚೆಯಾಗುತ್ತಿದೆ ಎಂಬುದನ್ನು ಅಧ್ಯಯನ ನಡೆಸಲು ಕೇಂದ್ರವು ಮಾಜಿ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ನೇತೃತ್ವದ ಸಮಿತಿಯೊಂದನ್ನು ರಚಿಸಿದೆ.
ಒಂದು ರಾಷ್ಟ್ರ, ಒಂದು ಚುನಾವಣೆ ಕಲ್ಪನೆಯು ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದನ್ನು ಉಲ್ಲೇಖಿಸುತ್ತದೆ. ಇದರರ್ಥ ಲೋಕಸಭೆ ಮತ್ತು ಭಾರತದಾದ್ಯಂತ ಎಲ್ಲಾ ರಾಜ್ಯಗಳ ಅಸೆಂಬ್ಲಿಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆಯುತ್ತವೆ, ಮತದಾನವು ಬಹುಶಃ ಅದೇ ಸಮಯದಲ್ಲಿ ನಡೆಯುತ್ತದೆ.
ಸಂಸತ್ತಿನ ವಿಶೇಷ ಅಧಿವೇಶನವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಒಂಬತ್ತು ವರ್ಷಗಳಲ್ಲಿ ಮೊದಲ ವಿಶೇಷ ಅಧಿವೇಶನವಾಗಿದೆ, ಇದು ಜೂನ್ 30 ರಂದು ಮಧ್ಯರಾತ್ರಿ ಜಿಎಸ್‍ಟಿ ಜಾರಿಯನ್ನು ಗುರುತಿಸಲು 2017ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ವಿಶೇಷ ಜಂಟಿ ಅಧಿವೇಶನವನ್ನು ಕರೆದಿತ್ತು. ಆದಾಗ್ಯೂ, ಇದು ಐದು ದಿನಗಳ ಪೂರ್ಣಾವಧಿಯ ಅಧಿವೇಶನವಾಗಿದ್ದು, ಅಧಿವೇಶನಗಳ ಸಮಯದಲ್ಲಿ ಸಾಮಾನ್ಯವಾಗಿ ಎರಡೂ ಸದನಗಳು ಪ್ರತ್ಯೇಕವಾಗಿ ಸಭೆ ಸೇರುತ್ತವೆ ಎನ್ನಲಾಗಿದೆ.
ದೇಶದಲ್ಲಿ 1967 ರವರೆಗೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಒಂದೇ ಹಂತದಲ್ಲಿ ನಡೆಯುತ್ತಿತ್ತು. ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸ್ಥಳೀಯ ಪರಿಸ್ಥಿತಿಗನುಗುಣವಾಗಿ ಚುನಾವಣೆಗಳು ನಡೆಯುತ್ತಾ ಬಂದಿವೆ. ಒಂದು ವೇಳೆ ಈ ಮಸೂದೆಯು ಸಂಸತ್ತಿನ ಉಭಯ ಸದನಗಳಾದ ರಾಜ್ಯ ಸಭೆ ಮತ್ತು ಲೋಕಸಭೆಯಲ್ಲಿ ಅಂಗೀಕಾರವಾದರೆ ಇನ್ನು ಮುಂದೆ ದೇಶಾದ್ಯಂತ ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಜರುಗಲಿದೆ.
ಈ ವರ್ಷದ ಅಂತ್ಯಕ್ಕೆ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‍ಗಡ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ವಿಧಾನಸಭೆ ಚುನಾವಣೆ ಜರುಗುತ್ತಿರುವ ಸಂದರ್ಭದಲ್ಲೇ ಕೇಂದ್ರಸರ್ಕಾರ ಮಸೂದೆಯನ್ನು ಮಂಡಿಸಲು ಮುಂದಾಗಿರುವುದು ವಿಶೇಷವಾಗಿದೆ. ಇತ್ತೀಚಿಗೆ ಲೋಕಸಭೆಯಿಂದ ಸ್ಥಳೀಯ ಸಂಸ್ಥೆ ಚುನಾವಣೆಗಳವರೆಗೂ ಆರ್ಥಿಕ ವೆಚ್ಚ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿರುವುದು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಚುನಾವಣಾ ಆಯೋಗ ಎಷ್ಟೇ ಬಿಗಿಯಾದ ಕ್ರಮ ಕೈಗೊಂಡರೂ ರಂಗೋಲಿ ಕೆಳಗೆ ನುಸುಳುವ ವಿದ್ಯೆಯನ್ನು ಕರಗತ ಮಾಡಿಕೊಂಡಿರುವ ನೇತಾರರ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು ಇದರ ಮೂಲ ಉದ್ದೇಶವಾಗಿದೆ. ಒಂದೇ ರಾಷ್ಟ್ರ, ಒಂದೇ ಚುನಾವಣೆ ನಡೆಯಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯಾಗಿತ್ತು. ಬಹುತೇಕ ತಮ್ಮ ಚುನಾವಣಾ ಪ್ರಚಾರದಲ್ಲಿ ಇದನ್ನು ಅವರು ಹೆಚ್ಚು ಬಾರಿ ಪ್ರಸ್ತಾಪಿಸಿದ್ದರು. ಈ ವ್ಯವಸ್ಥೆ ಭಾರತಕ್ಕೆ ಅಗತ್ಯವಾಗಿದೆ.
ಏಕೆಂದರೆ ವರ್ಷದಲ್ಲಿ ಆಗಾಗ್ಗೆ ನಡೆಯುವ ಚುನಾವಣೆಗಳು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಆಗಲಿದೆ ಎಂದು ಹೇಳಿದ್ದರು. ಲೋಕಸಭೆ, ವಿಧಾನಸಭೆ ಮತ್ತು ಪಂಚಾಯಿತಿ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿಯ ವಿಷಯವನ್ನು ಅವರು ಪ್ರಸ್ತಾಪಿಸಿದ್ದರು.