ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದು, ಈ ಬಾರಿಯೂ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕೆಂದು ಬಿಜೆಪಿ ಪಣತೊಟ್ಟಿದೆ, ಅದರ ಹಿನ್ನೆಲೆಯಲ್ಲಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಹೀಗಾಗಿ ಪಂಚಾಯ್ತಿ ಮಟ್ಟದಿಂದಲೇ ಕೆಲಸ ಶುರು ಮಾಡಿದೆ. 200ಕ್ಕೂ ಅಧಿಕ ಕಾಲ್ ಸೆಂಟರ್‌ಗಳನ್ನು ತೆರೆದು ಜನರ ಸಮಸ್ಯೆಯನ್ನು ಆಲಿಸುವ ಕೆಲಸ ಮಾಡಲಿದೆ. ಕಾಲ್ ಸೆಂಟರ್ ತೆರೆಯುವ ಕುರಿತು ಬಿಜೆಪಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಹತ್ವದ ಸಭೆ ಕರೆದಿದ್ದು, ಕಾಲ್ ಸೆಂಟರ್ ಮೂಲಕ ಚುನಾವಣಾ ಪ್ರಚಾರ ಮಾದರಿಯ ರೂಪುರೇಷೆ ರಚನೆ ಮಾಡಲಾಗುವುದು.
2024ರ ಲೋಕಸಭೆ ಚುನಾವಣೆಗೂ ಮುನ್ನ 225ಕ್ಕೂ ಹೆಚ್ಚು ಕಾಲ್ ಸೆಂಟರ್‌ಗಳನ್ನು ತೆರೆಯಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕಾಲ್ ಸೆಂಟರ್ ಕುರಿತು ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ದೇಶದ ಮೂಲೆ ಮೂಲೆಯಿಂದ ಬರುವ ಪಕ್ಷದ ಕಾಲ್ ಸೆಂಟರ್ ಬಗ್ಗೆ ಸಂಯೋಜಕರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಕಾಲ್ ಸೆಂಟರ್ ಸಂಯೋಜಕರ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಸಂಘಟನಾ ಸಚಿವ ಬಿ.ಎಲ್.ಸಂತೋಷ್ ಲೋಕಸಭೆ ಚುನಾವಣೆಯ ಪ್ರಚಾರದ ರೂಪುರೇಷೆಯನ್ನೂ ಮಂಡಿಸಲಿದ್ದಾರೆ. ಈ ಸಭೆಯನ್ನು ಅಧಿಕೃತವಾಗಿ 2024ರ ಲೋಕಸಭೆ ಚುನಾವಣೆಯ ತಯಾರಿಯ ಆರಂಭ ಎಂದೇ ಹೇಳಬಹುದಾಗಿದೆ.
ಬನ್ಸಾಲ್ ಬಳಿ ಕಾಲ್ ಸೆಂಟರ್ ಕಮಾಂಡ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಅವರು 2024ರ ಲೋಕಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ಕಾಲ್ ಸೆಂಟರ್‌ನ ಕಾರ್ಯಕ್ರಮದ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ. ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಡೆಸಿದ ಸಭೆಯಲ್ಲಿ ಸುನೀಲ್ ಬನ್ಸಾಲ್ ಅವರು ಕಾಲ್ ಸೆಂಟರ್ ತೆರೆಯುವ ಕುರಿತು ವಿವರವಾದ ಮಾಹಿತಿ ನೀಡಿದ್ದರು.
ಈ ಸಮಯದಲ್ಲಿ, ಈ ಕಾಲ್ ಸೆಂಟರ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು 2024 ರ ಚುನಾವಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅವರು ಹೇಳಿದ್ದರು. ಇದಾದ ಬಳಿಕ ದೆಹಲಿಯಲ್ಲಿ ದೇಶಾದ್ಯಂತ ಕಾಲ್ ಸೆಂಟರ್ ಸಂಯೋಜಕರ ಸಭೆ ಕರೆಯಲಾಗಿದೆ. ಅಮಿತ್ ಶಾ, ಜೆಪಿ ನಡ್ಡಾ, ಬಿಎಲ್ ಸಂತೋಷ್, ಸುನೀಲ್ ಬನ್ಸಾಲ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.