ಬೆಂಗಳೂರು: ಸದ್ಯಕ್ಕೆ ರಾಜ್ಯದಲ್ಲಿ ಮೋಡ ಬಿತ್ತನೆ ಮಾಡುವ ಪ್ರಸ್ತಾಪವಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಮಾಡುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಹಲವು ಬಾರಿ ಮೋಡ ಬಿತ್ತನೆ ನಡೆದಿದ್ದು, ಇದು ವಿಫಲವಾಗಿದ್ದರಿಂದ ಈ ಪ್ರಸ್ತಾವನೆ ಕೈಬಿಡಲಾಗಿದೆ ಎಂದು ಅವರು ತಿಳಿಸಿದರು.
ನಗರದಲ್ಲಿಂದು ಬೆಂಗಳೂರು ಪ್ರೆಸ್ ಕ್ಲಬ್ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿದರೆ ಕೇಂದ್ರ ಸರ್ಕಾರ ಬರಗಾಲ ನಿರ್ವಹಣೆಗೆ ಬೇಕಾದ ನೆರವು ನೀಡುತ್ತದೆ. ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಿ ರೈತರಿಗೆ ಪರಿಹಾರ ಒದಗಿಸಿದರೂ, ಮಳೆ ಬೀಳದೆ ಇದ್ದಲ್ಲಿ ಭಾರೀ ಸಂಕಷ್ಟಕ್ಕೆ ರೈತ ವರ್ಗ ಸಿಲುಕಲಿದೆ ಎಂದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಯಮಾನುಸಾರ ಕೇಂದ್ರದಿಂದ ಪರಿಹಾರ ನೀಡಲಾಗುತ್ತದೆ. ಜತೆಗೆ ವಿಮೆಯೂ ದೊರೆಯಲಿದೆ. ಆದರೆ, ಮಳೆ ಬೀಳದೆ ಇದ್ದರೆ ರೈತರ ನೆಮ್ಮದಿ ಹಾಳು ಆಗುವ ಜೊತೆ ಜೊತೆಗೆ ಸಂಕಷ್ಟದ ಪರಿಸ್ಥಿತಿ ಉಂಟಾಗಲಿದೆ ಎಂದು ಹೇಳಿದರು.
ಹಿಂದೆ ಮೋಡ ಬಿತ್ತನೆ ಮಾಡಿದಾಗ ಸೂಕ್ತ ಪ್ರತಿಫಲ ಸಿಕ್ಕಿಲ್ಲ. ಹಾಗಾಗಿ ಮೋಡಬಿತ್ತನೆ ಸರ್ಕಾರದ ಮುಂದೆ ಇಲ್ಲ. ಸೆಪ್ಟೆಂಬರ್ 4 ರೊಳಗೆ ಬರ ಘೋಷಣೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಬರಗಾಲ ಘೋಷಣೆ ಸಾಧ್ಯತೆ ಇದೆ. ಹವಾಮಾನ ಮುನ್ಸೂಚನೆಯಂತೆ ಆಗಸ್ಟ್ ತಿಂಗಳಿನಲ್ಲಿ ಹೆಚ್ಚಿನ ಮಳೆ ಬೀಳುವ ನಿರೀಕ್ಷೆ ಇತ್ತು. ಆದರೆ ರಾಜ್ಯದಲ್ಲಿ ಈ ತಿಂಗಳು ಶೇ 99 ರಷ್ಟು ಮಳೆ ಕೊರತೆಯಾಗಿದೆ. 130 ತಾಲೂಕಿನಲ್ಲಿ ಬರ ಸ್ಥಿತಿ ಕುರಿತು ವರದಿ ಸಲ್ಲಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ವರದಿ ಸರ್ಕಾರದ ಕೈ ಸೇರಲಿದ್ದು, ಇದನ್ನು ಆಧರಿಸಿ ಬರ ಘೋಷಣೆ ಕುರಿತು ಸೆಪ್ಟೆಂಬರ್ ಮೊದಲ ವಾರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.