ಮೊಬೈಲ್‌ನಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದ್ರೆ ಕ್ಷಣದಲ್ಲೆ ಸಿಗುತ್ತ ರೈಲ್ವೆ ಟಿಕೆಟ್‌

ಸಮಗ್ರ ಪ್ರಭ ಸುದ್ದಿ
1 Min Read

ಕಾಸರಗೋಡು: ರೈಲ್ವೆ ಇಲಾಖೆಯು ತನ್ನ ಅಪ್ಲಿಕೇಶನ್‌ ಮಾರ್ಪಡಿಸುವ ಮೂಲಕ ಟಿಕೆಟ್‌ ವಿತರಣೆಯಲ್ಲಿ ಹೊಸ ಬದಲಾವಣೆ ತಂದಿದೆ. ಮೊಬೈಲ್‌ನಲ್ಲಿಯೇ ಕ್ಯೂಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡುವ ಮೂಲಕ ತಕ್ಷಣವೇ ಟಿಕೆಟ್‌ ಪಡೆಯಬಹುದಾಗಿದೆ.

ಹಲವು ನಿಲ್ದಾಣಗಳಲ್ಲಿ ಈ ಕ್ರಮವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದ ಪರಿಣಾಮ ಇದರಿಂದ ರೈಲ್ವೆ ನಿಲ್ದಾಣದ ಟಿಕೆಟ್‌ ಕೌಂಟರ್‌ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವವರ ಪ್ರಮಾಣ ಶೇ.30ರಷ್ಟು ಇಳಿಕೆಯಾಗಿದೆ.

ತಾಂತ್ರಿಕ ಬದಲಾವಣೆಯ ಈ ಯುಗದಲ್ಲಿ ಸರತಿ ಸಾಲಿನಲ್ಲಿ ನಿಲ್ಲದೇ ಸುಲಭವಾಗಿ ಟಿಕೆಟ್‌ ಖರೀದಿಸಲು ರೈಲ್ವೆ ‘ಯುಟಿಎಸ್‌’ ಎಂಬ ಮೊಬೈಲ್‌ ಆ್ಯಪ್‌ ಅನ್ನು ಪರಿಚಯಿಸಿದೆ. ಯುಟಿಎಸ್‌ ಆ್ಯಪ್‌ ಮೂಲಕ ಪ್ರಯಾಣಿಕರು, ಕಾಯ್ದಿರಿಸದ ಸಾಮಾನ್ಯ ಪ್ರಯಾಣದ ಟಿಕೆಟ್‌, ಪ್ಲಾಟ್‌ಫಾರ್ಮ್‌ ಟಿಕೆಟ್‌, ಸೀಸನ್‌ ಟಿಕೆಟ್‌ಗಳನ್ನು ಸುಲಭವಾಗಿ ಬುಕ್‌ ಮಾಡಬಹುದು.

ಆದರೆ, ಈ ಅಪ್ಲಿಕೇಶನ್‌ನಲ್ಲಿ ಸಾಕಷ್ಟು ನ್ಯೂನತೆಗಳಿದ್ದವು. ಅದನ್ನು ಸರಿಪಡಿಸುವ ಮೂಲಕ ಯುಡಿಎಸ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಲಾಗಿದೆ. ನಿಲ್ದಾಣಗಳಲ್ಲಿಇರುವ ಕ್ಯೂಆರ್‌ ಕೋಡ್‌ ಅನ್ನು ಆ್ಯಪ್‌ ಮೂಲಕ ಸ್ಕ್ಯಾ‌ನ್‌ ಮಾಡಿ ಟಿಕೆಟ್‌ ಪಡೆಯುವ ಹೊಸ ಆಯ್ಕೆಯನ್ನು ನೀಡಲಾಗಿದೆ.

ಅಪ್ಲಿಕೇಶನ್‌ನಲ್ಲಿರುವ ‘ಕ್ಯೂಆರ್‌ ಕೋಡ್‌ ಬುಕ್ಕಿಂಗ್‌’ ಆಯ್ಕೆಯನ್ನು ಬಳಸಿಕೊಂಡು ಟಿಕೆಟ್‌ ಖರೀದಿಸಬಹುದು. ಕೋಡ್‌ ಸ್ಕ್ಯಾ‌ನ್‌ ಮಾಡಿದ ನಂತರ ಗ್ರಾಹಕರಿಗೆ ಯಾತ್ರಾ ಟಿಕೆಟ್‌ ಅಥವಾ ಪ್ಲಾಟ್‌ಫಾರ್ಮ್‌ ಟಿಕೆಟ್‌ ಬೇಕೇ ಎಂಬ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಅದರ ನಂತರ ಗ್ರಾಹಕರು ಮೊದಲಿನಂತೆ ಯುಟಿಎಸ್‌ ಅಪ್ಲಿಕೇಶನ್‌ ಮೂಲಕ ಟಿಕೆಟ್‌ ಖರೀದಿಸಬಹುದು.

ಈ ಅಪ್ಲಿಕೇಶನ್‌ ಬಳಸಿ ಟಿಕೆಟ್‌ ಖರೀದಿಸುವವರು ತಪಾಸಣೆಯ ಸಮಯದಲ್ಲಿ ತಮ್ಮ ಮೊಬೈಲ್‌ ಫೋನ್‌ ಟಿಕೆಟ್‌ ತೋರಿಸಿದರೆ ಸಾಕಾಗುವುದು. ಇದಕ್ಕೆ ನೆಟ್‌ ಸಂಪರ್ಕದ ಅಗತ್ಯವಿಲ್ಲ. ಪರ್ಯಾಯವಾಗಿ ಕಾಗದದ ಟಿಕೆಟ್‌ ಬಯಸುವವರು ಟಿಕೆಟ್‌ನ ಸಂಖ್ಯೆಯನ್ನು ನಮೂದಿಸುವ ಮೂಲಕ ನಿಲ್ದಾಣದಲ್ಲಿರುವ ಸ್ವಯಂ ಚಾಲಿತ ಟಿಕೆಟ್‌ ವಿತರಣಾ ಯಂತ್ರದಿಂದ ಟಿಕೆಟ್‌ ಉಚಿತವಾಗಿ ಪಡೆಯಬಹುದು ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು.

Share this Article