ಕೊಪ್ಪಳ : ರಾಜ್ಯದಲ್ಲಿ ಜಾರಿಯಾಗುತ್ತಿರುವ ಗ್ಯಾರಂಟಿಗಳೆಲ್ಲಾ ನನ್ನ ಯೋಜನೆಗಳು. ಕಾಂಗ್ರೆಸ್‌ನವರು ನನ್ನ ಯೋಜನೆಗಳನ್ನು ಕಾಪಿ ಮಾಡಿದ್ದಾರೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿಯಿಂದ ಹಮ್ಮಿಕೊಂಡ ಗೃಹಲಕ್ಷ್ಮೀ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೋ ಮೂಲದಿಂದ ನಾನು ಘೋಷಿಸಿರುವ ಯೋಜನೆಗಳು ಸಿದ್ದರಾಮಯ್ಯ ಅವರ ಕಿವಿಗೆ ಬಿದ್ದು ಅವುಗಳನ್ನು ಜಾರಿಗೊಳಿಸುತ್ತಿದ್ದಾರೆ.
ಚುನಾವಣೆಗೂ ಮೂರು ತಿಂಗಳು ಮುನ್ನ ನಾನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಗಂಗಾವತಿಯಲ್ಲಿ ಸ್ಪರ್ಧಿಸಬೇಕು ಎಂದು ತೀರ್ಮಾನ ಮಾಡಿದಾಗ ಹಲವು ಯೋಜನೆಗಳನ್ನು ಘೋಷಿಸಿದ್ದೆ. ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ಮಾಸಾಶನ, ನಿರುದ್ಯೋಗಿಗಳಿಗೆ ಮಾಸಾಶಾನ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದ್ದೆ. ಅಂಜನಾದ್ರಿಯ ಆಂಜನೇಯ ಸ್ವಾಮಿ ಕೃಪೆಯಿಂದ ನನ್ನ ಕೆಲಸಗಳನ್ನು ಸಿದ್ದರಾಮಯ್ಯ ಅವರು ಜಾರಿಗೊಳಿಸುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ಇಡಿ ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ವಡ್ಡರಹಟ್ಟಿ ಗ್ರಾಮವನ್ನು ಗೃಹಲಕ್ಷ್ಮೀ ಯೋಜನೆ ಜಾರಿಗೆ ಆಯ್ಕೆಮಾಡಿಕೊಂಡಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನು ಹೇಳಿದ ಜನಾರ್ದನ ರೆಡ್ಡಿ, ಸರ್ಕಾರ ನೀಡುವ 2 ಸಾವಿರ ರೂ.ನಿಂದ ನಿಮ್ಮ ಮನೆ ನಡೆಯುತ್ತೆ ಎಂದಲ್ಲ, ಸರ್ಕಾರ ಕೊಟ್ಟರೂ, ಕೊಡದಿದ್ದರೂ ನಿಮ್ಮ ಜೀವನ ನೀವು ಮಾಡ್ತಿದ್ದೀರಿ. ನಿಮ್ಮ ಕಷ್ಟ, ನಿಮ್ಮ ದುಡಿಮೆಯಿಂದ ಜೀವನ ಮಾಡುತ್ತಿದೀರಿ ಎಂದು ಹೇಳಿದರು.