ನವದೆಹಲಿ : ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಯಾವುದೇ ಸಂದರ್ಭದಲ್ಲೂ ಚುನಾವಣೆ ನಡೆಸಲು ಸಿದ್ದವಿದೆ ಎಂದು ಸುಪ್ರೀಂಕೋರ್ಟ್‍ಗೆ ಕೇಂದ್ರ ಸರ್ಕಾರ ತಿಳಿಸಿದೆ. ಅಲ್ಲಿನ ಆಡಳಿತದ ಅನುಕೂಲಕ್ಕಾಗಿ ಜಮ್ಮುಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಲಾಗಿದೆ. ಇದು ತಾತ್ಕಾಲಿಕ ಪರಿಹಾರವಾಗಿದ್ದು, ಚುನಾವಣೆ ನಡೆಸಲು ಯಾವುದೇ ಅಡ್ಡಿ ಇಲ್ಲ. ಯಾವುದೇ ಸಂದರ್ಭದಲ್ಲಿ ನಾವು ಸಿದ್ದರಿದ್ದೇವೆ ಎಂದು ಸುಪ್ರೀಂಕೋರ್ಟ್‍ಗೆ ಮಾಹಿತಿ ನೀಡಿದೆ.
ಜಮ್ಮುಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ ವಿಶೇಷ ಸ್ಥಾನಮಾನ 370ನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಮುಂದುವರೆದ ವಿಚಾರಣಾ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಇದನ್ನು ಖಚಿತಪಡಿಸಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ವೈ.ಚಂದ್ರಚೂಡ್, ಸಂಜಯ್ ಕಿಶಾನ್ ಕೌಲ್, ಸಂಜೀವ್ ಖನ್ನಾ, ಬಿ.ಆರ್.ಗವಾಯ್ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಅರ್ಜಿ ವಿಚಾರಣೆ ನಡೆಸುತ್ತಿದೆ. ಜಮ್ಮುಕಾಶ್ಮೀರಕ್ಕೆ ಯಾವಾಗ ರಾಜ್ಯದ ಸ್ಥಾನಮಾನ ನೀಡಲಾಗುತ್ತದೆ ಎಂಬುದನ್ನು ನಾನು ಖಚಿತವಾಗಿ ಇಂಥದ್ದೇ ದಿನಾಂಕ ಎಂದು ಹೇಳಲಾರೆ.
ಪ್ರಸ್ತುತ ಈ ರಾಜ್ಯದಲ್ಲಿ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಈಗ ಸಾಕಷ್ಟು ಸುಧಾರಣೆ ಕಂಡಿದೆ. ರಾಜ್ಯದಲ್ಲಿ ಅನೇಕ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಉದ್ಯಮಿಗಳು ಬಂಡವಾಳ ಹೂಡಲು ಮುಂದೆ ಬರುತ್ತಿದ್ದಾರೆ. ಉದ್ಯೋಗಗಳು ಸೃಷ್ಟಿಯಾಗುತ್ತಿದ್ದು, ಯುವಕರು ಸ್ವಯಂಪ್ರೇರಿತರಾಗಿ ಉದ್ಯೋಗ ಪಡೆಯಲು ಹಾತೊರೆಯುತ್ತಿದ್ದಾರೆ.
ಇದು ಒಂದು ರಾಜ್ಯ ಅಭಿವೃದ್ಧಿಯ ಕಡೆ ಸಾಗುತ್ತಿದೆ ಎಂಬುದರ ಮುನ್ಸೂಚನೆ ಎಂದು ಸಾಲಿಸಿಟರ್ ಜನರಲ್ ಮೆಹ್ತಾ ನ್ಯಾಯಾೀಧಿಶರ ಗಮನಕ್ಕೆ ತಂದರು. ಒಂದು ಕಾಲದಲ್ಲಿ ಭಯೋತ್ಪಾದಕರು ಸೈನಿಕರ ಮೇಲೆ ಹಲ್ಲೆ ನಡೆಸುವುದು, ನಾಗರಿಕರ ಅಪಹರಣ, ಕಗ್ಗೊಲೆ, ಸೈನಿಕರ ಮೇಲೆ ಕಲ್ಲು ತೂರಾಟದಂತಹ ಪ್ರಕರಣಗಳು ನಡೆಯುತ್ತಿದ್ದವು. ಕಳೆದ ಹಲವು ದಿನಗಳಿಂದ ಸೈನಿಕರ ಮೇಲೆ ಇಂತಹ ಯಾವುದೇ ಪ್ರಕರಣಗಳು ನಡೆದಿಲ್ಲ. ಅನೇಕ ಸಂಘಟನೆಗಳಿಗೆ ಕಡಿವಾಣ ಹಾಕಲಾಗಿದೆ. ಯಾರು ಕೂಡ ಬಂದ್‍ಗೆ ಕರೆಕೊಡುವಂತಹ ಧೈರ್ಯ ಮಾಡುತ್ತಿಲ್ಲ. ಇದು ಸುಧಾರಣೆ ಹೆಜ್ಜೆ ಎಂದು ಬಣ್ಣಿಸಿದರು.
2019ರ ಹಿಂದೆಗಿಂತ ಭಯೋತ್ಪಾದಕ ಚಟುವಟಿಕೆಗಳು ಈಗ ಸಾಕಷ್ಟು ಕಡಿಮೆಯಾಗಿದೆ. ಜಮ್ಮುಕಾಶ್ಮೀರದಲ್ಲಿ ಈ ಹಿಂದೆ ಶೇ.42.5ರಷ್ಟು ಭಯೋತ್ಪಾದನಾ ಚಟುವಟಿಕೆಗಳು ನಡೆದಿದ್ದವು. ಈಗ ಇದು ಯಥೇಚ್ಛವಾಗಿ ಕಡಿಮೆಯಾಗಿದೆ. ಕೇಂದ್ರ ಸರ್ಕಾರ ಮೊದಲ ಹಂತವಾಗಿ ಸ್ಥಳೀಯ ಸಂಸ್ಥೆಗಳನ್ನು ನಡೆಸಲು ಸಿದ್ದವಿದೆ. ಇದಕ್ಕೆ ಅಗತ್ಯವಾದ ಪೂರ್ವ ಸಿದ್ದತೆಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. ಮತದಾರರ ಪಟ್ಟಿಯನ್ನು ಈಗಾಗಲೇ ಸಿದ್ದಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಚುನಾವಣಾ ಆಯೋಗ ಯಾವುದೇ ಸಂದರ್ಭದಲ್ಲಿ ದಿನಾಂಕವನ್ನು ಘೋಷಣೆ ಮಾಡಬಹುದು.
2019ರ ಹಿಂದೆ ಮೂರು ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲಾಗಿತ್ತು. ಕೇಂದ್ರಾಡಳಿತ ಘೋಷಣೆ ಮಾಡಿದ ಮೇಲೆ ಜಮ್ಮುಕಾಶ್ಮೀರದ ಚಿತ್ರಣವೇ ಬದಲಾಗಿದೆ ಎಂದು ನ್ಯಾಯಾಧೀಶರಿಗೆ ಸಾಲಿಸಿಟರ್ ಜನರಲ್ ಮನವರಿಕೆ ಮಾಡಿದರು.