ಚಿತ್ರದುರ್ಗ: ರಾಜ್ಯದಲ್ಲಿ ಶೇ.99ರಷ್ಟು ಮಳೆ ಕೊರತೆಯಾಗಿದ್ದು, 130 ತಾಲೂಕುಗಳ ಬರ ಪರಿಸ್ಥಿತಿ ಕುರಿತು ವರದಿ ಸಲ್ಲಿಸಲು ಸೂಚಿಸಲಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಬರ ಘೋಷಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಹೇಳಿದರು.
ಚಿತ್ರದುರ್ಗ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ಮಳೆ ಕೊರತೆಯಿಂದ ಹಾನಿಯಾಗಿರುವ ಮೆಕ್ಕೆಜೋಳ, ಶೇಂಗಾ ಹಾಗೂ ರಾಗಿ ಬೆಳೆಗಳನ್ನು ಸಚಿವರು ವೀಕ್ಷಿಸಿದರು.
ಬಳಿಕ ಮಾತನಾಡಿದ ಸಚಿವರು, ಜಿಲ್ಲೆಗಳವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಬೆಳೆ ಪರಿಸ್ಥಿತಿ ಪರಿಶೀಲಿಸಲಾಗುವುದು. ನಂತರ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ವರದಿ ಬಳಿಕ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಆಗಸ್ಟ್‌ನಲ್ಲಿ ಶೇ.99 ರಷ್ಟು ಮಳೆ ಕೊರತೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿರುವ 6.5 ಕೋಟಿ ಜನಸಂಖ್ಯೆಯ ಸಮಸ್ಯೆಗಳನ್ನು ಸರಕಾರ ನಿವಾರಿಸಲಿದ್ದು, ಫಲಾನುಭವಿಗಳ ಖಾತೆಗೆ ನೇರವಾಗಿ ಪರಿಹಾರ ಮೊತ್ತವನ್ನು ಜಮಾ ಮಾಡಲಿದೆ. ಬರಗಾಲ ಘೋಷಣೆಗೆ ಷರತ್ತುಗಳನ್ನು ಸಡಿಲಿಸುವಂತೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ, ಆದರೆ, ಕೇಂದ್ರದಿಂದ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ. ಪರಿಹಾರವನ್ನು ವಿತರಿಸುವ ಮಾರ್ಗಸೂಚಿಗಳನ್ನು ಸರಳೀಕರಿಸಲು ನಾವೂ ಪ್ರಯತ್ನಿಸುತ್ತಿದ್ದೇವೆಂದು ತಿಳಿಸಿದರು.