ಚಂದಮಾಮನ ಮೇಲೆ ಯಶಸ್ವಿಯಾಗಿ ಇಳಿದ ವಿಕ್ರಮ! ಭಾರತದ ದಿಗ್ವಿಜಯ

ಸಮಗ್ರ ಪ್ರಭ ಸುದ್ದಿ
2 Min Read

ಹೊಸದಿಲ್ಲಿ: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಐತಿಹಾಸಿಕ ಸಾಧನೆ ಮಾಡಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆಯನ್ನು ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜತೆಗ ಚಂದ್ರಯಾನದಲ್ಲಿ ಯಶಸ್ವಿಯಾಗಿರುವ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳ ಸಾಲಿಗೆ ಸೇರಿಕೊಂಡಿದೆ.

ಸಾಕಷ್ಟು ಕುತೂಹಲ, ಆತಂಕ, ನಿರೀಕ್ಷೆಗಳ ನಡುವೆ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಯಾವುದೇ ಅಡ್ಡಿ ಆತಂಕವಿಲ್ಲದೆ ನಿಧಾನವಾಗಿ ಹಾಗೂ ಯಶಸ್ವಿಯಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಮೂಲಕ 140 ಕೋಟಿ ಭಾರತೀಯರ ಕನಸು ಮತ್ತು ಹಾರೈಕೆಗಳನ್ನು ನನಸಾಗಿಸಿದೆ.

ಅಮೆರಿಕ, ರಷ್ಯಾ ಮತ್ತು ಚೀನಾ ಬಳಿಕ ಚಂದ್ರನ ಮೇಲೆ ನೌಕೆಯನ್ನು ಇಳಿಸಿದ ನಾಲ್ಕನೇ ದೇಶ ಎಂಬ ಕೀರ್ತಿಗೆ ಭಾರತ ಪಾತ್ರವಾಗಿದೆ. ಭಾರತಕ್ಕಿಂತಲೂ ಹಿಂದಿನಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಮತ್ತು ಮಹತ್ತರ ಸಂಶೋಧನೆಗಳನ್ನು ನಡೆಸಿರುವ ಮುಂದುವರಿದ ದೇಶಗಳಿಗೆ ಕೂಡ ಇದು ಸಾಧ್ಯವಾಗಿಲ್ಲ ಎನ್ನುವುದು ಗಮನಾರ್ಹ ಸಂಗತಿ.

ಲ್ಯಾಂಡಿಂಗ್‌ ಕಾರ್ಯ ಯಶಸ್ವಿಯಾಗುವುದಕ್ಕೂ ಮುನ್ನ ಕೊನೆಯ 15 ನಿಮಿಷಗಳ ಪ್ರಕ್ರಿಯೆ ಯಾವ ರೀತಿ ಇತ್ತು? ಅದರ ಅಪ್ಡೇಟ್‌ ಇಲ್ಲಿದೆ.

ಕೊನೆಯ 15 ನಿಮಿಷಗಳ ಸಾಹಸ
ಚಂದ್ರನಿಂದ ಕೇವಲ 150 ಮೀಟರ್ ದೂರದಲ್ಲಿ ವಿಕ್ರಮ್ ಲ್ಯಾಂಡರ್ ಲಂಬವಾಗಿ ಇಳಿಕೆಯ ಸ್ಥಿತಿಗೆ ಬಂದಿದೆ. ಲ್ಯಾಂಡರ್‌ನ ಸೆನ್ಸಾರ್‌ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ.

ಲ್ಯಾಂಡರ್ ಆಲ್ಟಿಟ್ಯೂಡ್ ಹೋಲ್ಡ್ ಹಂತಕ್ಕೆ ಪ್ರವೇಶಿಸಿದ್ದು, ಫೈನ್ ಬ್ರೇಕಿಂಗ್ ಆರಂಭವಾಗಿದೆ. ಈ ಬ್ರೇಕಿಂಗ್ ಹಂತ ಮುಗಿಯಲು 2-30 ನಿಮಿಷ ಮಾತ್ರ ಬಾಕಿ ಇದೆ. ಚಂದ್ರನಿಂದ ಕೇವಲ 6 ಕಿಮೀ ದೂರದಲ್ಲಿ ಲ್ಯಾಂಡರ್ ಇದೆ.

ಲ್ಯಾಂಡಿಂಗ್ ಪ್ರಕ್ರಿಯೆ ನಿರಾತಂಕವಾಗಿ ನಡೆಯುತ್ತಿದ್ದು, ಚಂದ್ರನಿಂದ ಕೇವಲ 15 ಕಿಮೀ ದೂರದಲ್ಲಿ ವಿಕ್ರಮ್ ಲ್ಯಾಂಡರ್ ಇದೆ. ಈವರೆಗೂ ಲ್ಯಾಂಡರ್ ಇಳಿಕೆ ಪ್ರಕ್ರಿಯೆಯಲ್ಲಿ 596 ಕಿಮೀ ಪಯಣಿಸಿದೆ. ಚಂದ್ರನ ಇಳಿಕೆ ಪಯಣದಲ್ಲಿ ಶೇ 75-80ರಷ್ಟನ್ನು ಲ್ಯಾಂಡರ್ ಕ್ರಮಿಸಿದೆ.

ಎಲ್ಲವೂ ಸುಗಮವಾಗಿ ನಡೆಯುತ್ತಿದ್ದು, ವಿಕ್ರಮ್ ಲ್ಯಾಂಡರ್ ಯಾವುದೇ ಅಡ್ಡಿಗಳಿಲ್ಲದೆ ಚಂದ್ರನ ಕಡೆಗೆ ಇಳಿಯುತ್ತಿದೆ. ವೇಗವು ಪ್ರತಿ ಸೆಕೆಂಡಿಗೆ 1150 ಮೀಟರ್‌ಗೆ ಇಳಿಕೆಯಾಗಿದೆ. ಲ್ಯಾಂಡರ್ ಚಂದ್ರನಿಂದ 27 ಕಿಮೀ ಎತ್ತರದಲ್ಲಷ್ಟೇ ಇದೆ. ಈ ಹಂತದಲ್ಲಿ ರಫ್ ಬ್ರೇಕಿಂಗ್ ಹಂತ ನಡೆಯುತ್ತಿದೆ. ಎತ್ತರವನ್ನು ನಿಯಂತ್ರಿಸುವ ಹಂತದ ಪ್ರಕ್ರಿಯೆಯು ಕೇವಲ 10 ಸೆಕೆಂಡುಗಳಲ್ಲಿ ಮುಗಿದಿದೆ.

ಚಂದ್ರನ ಕಡೆಗೆ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವ (ಪವರ್ ಡಿಸೆಂಟ್) ಕಾರ್ಯಾಚರಣೆ ಆರಂಭವಾಗಿದೆ. ಅಂತಿಮ ಇಳಿಕೆಯ ಕಾರ್ಯ ಶುರುವಾದ ಬಳಿಕ ಲ್ಯಾಂಡರ್‌ನ ನಾಲ್ಕು ಎಂಜಿನ್‌ಗಳ ಪೈಕಿ ಎರಡು ಎಂಜಿನ್ ಯೋಜನೆಯಂತೆಯೇ ಬಂದ್ ಆಗಿವೆ. ಈ ಪ್ರಕ್ರಿಯೆ ಶುರುವಾಗುತ್ತಿದ್ದಂತೆಯೇ ಬೆಂಗಳೂರಿನ ಇಸ್ರೋ ನಿಯಂತ್ರಣ ಕೇಂದ್ರದಲ್ಲಿನ ವಿಜ್ಞಾನಿಗಳು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.

ದಕ್ಷಿಣ ಧ್ರುವದ ಮೇಲೆ ಇಂದೇ ವಿಕ್ರಮ್ ಲ್ಯಾಂಡರ್ ಇಳಿಸಲು ಸೂಕ್ತ ವಾತಾವರಣ ಇದೆ ಎಂಬ ಮಾಹಿತಿಯನ್ನು ಇಸ್ರೋ ನೀಡಿದೆ. ಇದರಿಂದ, ಒಂದು ವೇಳೆ ವಾತಾವರಣ ಅನುಕೂಲಕರವಾಗದೆ ಇದ್ದರೆ, ಆಗಸ್ಟ್ 27ರಂದು ಎರಡನೇ ಪ್ರಯತ್ನ ನಡೆಸುವ ಪ್ಲ್ಯಾನ್ ಬಿ ಅಗತ್ಯ ಬೀಳುವುದಿಲ್ಲ ಎನ್ನಲಾಗಿದೆ.

ಚಂದ್ರಯಾನ-1ರಲ್ಲಿ ಆರ್ಬಿಟರ್ ಮಾತ್ರ ಕಳುಹಿಸಿದ್ದ ಭಾರತ, ಚಂದ್ರಯಾನ-2 ಯೋಜನೆಯಲ್ಲಿ ಆರ್ಬಿಟರ್ ಜತೆಗೆ ರೋವರ್ ಅನ್ನು ಹೊತ್ತ ಲ್ಯಾಂಡರ್ ಅನ್ನು ಕೂಡ ರವಾನಿಸಿತ್ತು. ಆರ್ಬಿಟರ್ ನಿರೀಕ್ಷೆಯಂತೆ ಕಕ್ಷೆ ಸೇರಿ ಈಗಲೂ ತನ್ನ ಕರ್ತವ್ಯ ನಿಭಾಯಿಸುತ್ತಿದೆ. ಆದರೆ ವಿಕ್ರಮ್ ಲ್ಯಾಂಡರ್ ಅನ್ನು ಆಗ ಚಂದ್ರನ ಬೃಹತ್ ಕುಳಿಗಳ ನಡುವೆ ನಿಧಾನವಾಗಿ ಇಳಿಸುವ ಪ್ರಯತ್ನ ಸಫಲವಾಗಿರಲಿಲ್ಲ.

Share this Article