ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಏಷ್ಯಾಕಪ್ ಟೂರ್ನಿಗೆ ಟೀಂ ಇಂಡಿಯಾದ 17 ಸದಸ್ಯರ ಬಲಿಷ್ಠ ತಂಡವನ್ನು ಅಜಿತ್ ಅಗರ್‍ಕರ್ ಸಾರಥ್ಯದ ಆಯ್ಕೆ ಮಂಡಳಿಯು ಪ್ರಕಟಿಸಿದ್ದು ಕೆಲವು ಆಶ್ಚರ್ಯಕರ ತೀರ್ಮಾನಗಳನ್ನು ಕೈಗೊಂಡಿದ್ದಾರೆ.
ರೋಹಿತ್‍ಗೆ ನಾಯಕತ್ವ:
ತವರಿನ ಅಂಗಳದಲ್ಲಿ ಅಕ್ಟೋಬರ್ 5 ರಿಂದ ನವೆಂಬರ್ 19ರವರೆಗೆ ನಡೆಯಲಿರುವ ಪ್ರತಿಷ್ಠಿತ ಏಕದಿನ ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡವನ್ನು ಕಟ್ಟಲು ಮುಂದಾಗಿರುವ ಆಯ್ಕೆ ಮಂಡಳಿಯು ಏಷ್ಯಾಕಪ್ ಟೂರ್ನಿಯ ಮೂಲಕವೇ ಕಾರ್ಯಾಚರಣೆಗೆ ಮುಂದಾಗಿದ್ದು, ಹಿಟ್‍ಮ್ಯಾನ್ ರೋಹಿತ್ ಶರ್ಮಾರವರೇ ತಂಡವನ್ನು ಮುನ್ನಡೆಸಲಿದ್ದಾರೆ. ಹಾರ್ದಿಕ್ ಪಾಂಡ್ಯರನ್ನು ಉಪನಾಯಕರಾಗಿ ಆಯ್ಕೆ ಮಾಡಲಾಗಿದೆ.
ರಾಹುಲ್, ಶ್ರೇಯಸ್, ಬುಮ್ರಾ ಇನ್:
ಆಟಗಾರರ ಫಿಟ್ನೆಸ್ ಬಗ್ಗೆ ಪೂರ್ಣ ಮಾಹಿತಿ ಪಡೆಯುವ ಸಲುವಾಗಿ ಏಷ್ಯಾಕಪ್ ಟೂರ್ನಿಗೆ ತಂಡವನ್ನು ಪ್ರಕಟಿಸಲು ಬಿಸಿಸಿಐ ಸೆಲೆಕ್ಟರ್ಸ್‍ಗಳು ತಡ ಮಾಡಿದ್ದರೂ, ಈಗ ಆಟಗಾರರ ಫಿಟ್ನೆಸ್‍ನ ಬಗ್ಗೆ ಸಂಪೂರ್ಣ ಮಾಹಿತಿ ದೊರಕಿದ್ದು, ತಂಡವನ್ನು ಪ್ರಕಟಿಸಿ ಕುತೂಹಲಗಳಿಗೆ ಅಂತಿಮ ತೆರೆ ಎಳೆದಿದ್ದಾರೆ.
ಐಪಿಎಲ್ ವೇಳೆ ಗಾಯಗೊಂಡಿದ್ದ ಕನ್ನಡಿಗ ಕೆ.ಎಲ್.ರಾಹುಲ್ , ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದ ಶ್ರೇಯಾಸ್ ಅಯ್ಯರ್ ಅವರು ತಂಡಕ್ಕೆ ಮರಳಿದ್ದು ಮಧ್ಯಮ ಕ್ರಮಾಂಕದ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಅಲ್ಲದೆ ಐರ್ಲೆಂಡ್ ಸರಣಿಯಲ್ಲಿ ಬಲವಾಗಿ ಕಮ್ ಬ್ಯಾಕ್ ಮಾಡಿರುವ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಕನ್ನಡಿಗ ಪ್ರಸಿಧ್ ಕೃಷ್ಣ ಅವರು ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ತಿಲಕ್ ವರ್ಮಾಗೆ ಅವಕಾಶ:
ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಟಿ20-ಐ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿ ಗಮನ ಸೆಳೆದಿದ್ದ ಯುವ ಆಟಗಾರ ತಿಲಕ್‍ವರ್ಮಾಗೂ ತಂಡದಲ್ಲಿ ಸ್ಥಾನ ನೀಡಿದ್ದು, ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಲು ಮುಂದಾಗಿದೆಯಾದರೂ ಸೂರ್ಯಕುಮಾರ್ ಯಾದವ್‍ಗೂ ಅವಕಾಶ ಲಭಿಸಿದ್ದು, ಸಂಜು ಸ್ಯಾಮ್ಸನ್‍ರನ್ನು ತಂಡದಿಂದ ಹೊರಗಿಡಲಾಗಿದ್ದು, ಮೀಸಲು ವಿಕೆಟ್‍ಕೀಪರ್ ಆಗಿ ಸ್ಥಾನ ಪಡೆದಿದ್ದಾರೆ. ಸ್ಪಿನ್ನರ್ ರೂಪದಲ್ಲಿ ಚೈನಾಮನ್ ಸ್ಪಿನ್ನರ್ ಕುಲ್ದೀಪ್‍ಯಾದವ್‍ಗೆ ಸ್ಥಾನ ಕಲ್ಪಿಸಲಾಗಿದ್ದು, ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್‍ರನ್ನು ಕೈಬಿಡಲಾಗಿದೆ.
ಏಷ್ಯಾಕಪ್‍ಗೆ ಟೀಮ್ ಇಂಡಿಯಾದ 17 ಸದಸ್ಯರ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲï, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್‍ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿಧ್ ಕೃಷ್ಣ.
ಟೂರ್ನಿ ಆರಂಭ:
ಶ್ರೀಲಂಕಾ ಹಾಗೂ ಪಾಕಿಸ್ತಾನದ ಆತಿಥ್ಯದಲ್ಲಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 19ರವರೆಗೆ ನಡೆಯಲಿದ್ದು, ಸೆಪ್ಟೆಂಬರ್ 2 ರಂದು ನಡೆಯಲಿರುವ ಸಂಪ್ರದಾಯಿಕ ವೈರಿ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದ ಮೂಲಕ ರೋಹಿತ್ ಶರ್ಮಾ ಪಡೆ ಅಭಿಯಾನ ಆರಂಭಿಸಲಿದೆ.
ಭಾಗವಹಿಸಲಿರುವ ತಂಡಗಳು:
ಹಾಲಿ ಚಾಂಪಿಯನ್ ಶ್ರೀಲಂಕಾ, 7ಬಾರಿ ಚಾಂಪಿಯನ್‍ಪಟ್ಟ ಅಲಂಕರಿಸಿರುವ ಟೀಮ್ ಇಂಡಿಯಾ, ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶ ತಂಡದ ಜೊತೆಗೆ ನೇಪಾಳ ತಂಡ ಹೊಸದಾಗಿ ಸೇರ್ಪಡೆಯಾಗಿದೆ.