ಬೆಂಗಳೂರು: ರಾಜ್ಯ ಸರಕಾರ ಜು.20ರಿಂದ ಜಾರಿಗೆ ಬರುವಂತೆ ಮದ್ಯ ಹಾಗೂ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿದ ಪರಿಣಾಮ ಭಾರತೀಯ ಮದ್ಯ(ಐಎಂಎಲ್) ಮಾರಾಟ ಪ್ರಮಾಣ ಶೇ.15ರಷ್ಟು ಕುಸಿತ ಕಂಡಿದೆ. ಆದರೆ, ಬಿಯರ್ ಮಾರಾಟದಲ್ಲಿ ಅಂತಹ ವ್ಯತ್ಯಯವೇನೂ ಆಗಿಲ್ಲ.
ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ಚಿಲ್ಲರೆ ಮದ್ಯದ ಅಂಗಡಿಗಳಲ್ಲಿ ಮಾರಾಟ ಕುಸಿದಿರುವ ಕಾರಣ, ರಾಜ್ಯ ಪಾನೀಯ ನಿಗಮಕ್ಕೆ ಮದ್ಯಕ್ಕಾಗಿ ಸಲ್ಲಿಸುವ ಖರೀದಿ ಬೇಡಿಕೆ ಕೂಡ ಇಳಿಕೆಯಾಗಿದೆ. ಅಬಕಾರಿ ಇಲಾಖೆ ಅಂಕಿ-ಅಂಶಗಳ ಪ್ರಕಾರ ಮದ್ಯ ಮಾರಾಟ ಶೇ.15ರಷ್ಟು ಕುಸಿತವಾಗಿದ್ದರೆ, ಬಿಯರ್ ಶೇ.5ರಷ್ಟು ಕುಸಿತ ಕಂಡಿದೆ.
ಇದು ಸರಕಾರದ ಆದಾಯ ಸಂಗ್ರಹದ ಮೇಲೂ ಪರಿಣಾಮ ಬೀರುತ್ತಿದೆ. ಏಪ್ರಿಲ್, ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ಕ್ರಮವಾಗಿ 2308, 2607, 3549 ಮತ್ತು 2980 ಕೋಟಿ ರೂ.ಇದ್ದ ಆದಾಯ ಆಗಸ್ಟ್ ತಿಂಗಳಲ್ಲಿ (ಆ.14ವರೆಗೆ) ಕೇವಲ 962 ಕೋಟಿ ರೂ. ಸಂಗ್ರಹವಾಗಿದೆ.
ಐಎಂಎಲ್ ಮೇಲೆ ಶೇ.20ರಷ್ಟು ಸುಂಕ ಹೆಚ್ಚಳದಿಂದ ಎಲ್ಲಾ 18 ಸ್ಪ್ಯಾಬ್‌ಗಳ ಮದ್ಯದ ಬೆಲೆ ಏರಿಕೆಯಾಗಿದೆ. ಪ್ರತಿ ಪೆಗ್‌ಗೆ 10ರಿಂದ 20 ರೂ. ಹಾಗೂ ಪ್ರತಿ ಬಾಟಲ್‌ಗೆ ಕನಿಷ್ಠ 50 ರೂ.ಗಳಿಂದ 200 ರೂ.ಗಳವರೆಗೆ ಮದ್ಯದ ದರ ಏರಿಕೆಯಾಗಿದೆ. ಪ್ರತಿ ತಿಂಗಳು ಸರಾಸರಿ 61 ಲಕ್ಷ ಟನ್ ಕಾರ್ಟನ್ (ಪೆಟ್ಟಿಗೆ) ಮಾರಾಟವಾಗುತ್ತಿತ್ತು. ಆದರೆ, ಆಗಸ್ಟ್ ತಿಂಗಳ ಮೊದಲ 15 ದಿನ ಕೇವಲ 18.8 ಲಕ್ಷ ಕಾರ್ಟನ್ ಮದ್ಯ ಮಾರಾಟವಾಗಿದೆ.
