ಬೆಂಗಳೂರು: ರಾಜ್ಯ ಸರಕಾರ ಹೆಚ್ಚುವರಿಯಾಗಿ ಒಟ್ಟು ಹತ್ತು ಸಾವಿರ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಅವಕಾಶ ನೀಡಿದೆ.
13,352 ಖಾಯಂ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವಿಳಂಬ ವಾಗುತ್ತಿರುವ ಹಿನ್ನೆಲೆ ಯಲ್ಲಿ ಹಾಗೂ ವರ್ಗಾವಣೆ ಪ್ರಕ್ರಿಯೆ ಯಿಂದ ಹಲವು ಶಾಲೆಗಳಲ್ಲಿ ಶಿಕ್ಷಕರ ತೀವ್ರ ಕೊರತೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಅತಿಥಿ ಶಿಕ್ಷಕರ ನೇಮಕದ ಮೂಲಕ ಕೊರತೆ ತುಂಬಿಕೊಳ್ಳಲು ಸರಕಾರ ಮುಂದಾಗಿದೆ.
ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಎಂಟು ಸಾವಿರ ಶಿಕ್ಷಕರು ಮತ್ತು ಪ್ರೌಢ ಶಾಲೆಗಳಿಗೆ ಎರಡು ಸಾವಿರ ಶಿಕ್ಷಕರನ್ನು ನೇಮಿಸಲು ಸರಕಾರ ಮಂಜೂರಾತಿ ನೀಡಿದೆ.
ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಕೌನ್ಸೆಲಿಂಗ್ ಮೂಲಕ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಕೌನ್ಸೆಲಿಂಗ್ ಮೂಲಕ ಖಾಲಿಯಾಗಿರುವ ಹುದ್ದೆಗಳನ್ನು ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಖಾಲಿ ಯಾಗಿರುವ ಹುದ್ದೆಗಳನ್ನು ಆದ್ಯತೆ ಮೇರೆಗೆ ಪೂರ್ಣ ಪ್ರಮಾಣದಲ್ಲಿ ಅತಿಥಿ ಶಿಕ್ಷಕರಿಂದ ಭರ್ತಿ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚನೆ ನೀಡಿದೆ.
ಮೇ ತಿಂಗಳ ಅಂತ್ಯದಲ್ಲಿ ಸರಕಾರ ಪ್ರಾಥಮಿಕ ಶಾಲೆಗಳಿಗೆ 27 ಸಾವಿರ ಮತ್ತು ಪ್ರೌಢ ಶಾಲೆಗಳಿಗೆ ಆರು ಸಾವಿರ ಅತಿಥಿ ಶಿಕ್ಷಕರನ್ನು ಮಂಜೂರು ಮಾಡಿತ್ತು. ಈಗ ಮತ್ತೆ ಹತ್ತು ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ನೀಡಿದ್ದು ತನ್ಮೂಲಕ ಒಟ್ಟು ಅತಿಥಿ ಶಿಕ್ಷಕರ ಸಂಖ್ಯೆ 43 ಸಾವಿರಕ್ಕೆ ಏರಲಿದೆ. 2022-23ರ ಸಾಲಿನಲ್ಲಿ ಒಟ್ಟು 32,078 ಅತಿಥಿ ಶಿಕ್ಷಕರನ್ನು ನೇಮಿಸಲಾಗಿತ್ತು