ಗದಗ: ಸಮಾಜದಲ್ಲಿ ಪ್ರಾಮಾಣಿಕವಾಗಿ ದಿನಂಪ್ರತಿ ಕಾರ್ಯನಿರ್ವಹಿಸುವ ಬೀದಿಬದಿ ವ್ಯಾಪಾರಸ್ಥರ ಬದುಕನ್ನು ಮೇಲ್ದರ್ಜೆಗೇರಿಸುವ ಆಶಯದೊಂದಿಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಅವಳಿ ನಗರದ ಬೀದಿ ಬದಿ ವ್ಯಾಪಾರಸ್ಥರಿಗೆ ಉಡುಗರೆಯಾಗಿ ಹೈಟೆಕ್ ತಳ್ಳುಗಾಡಿಗಳನ್ನು ನೀಡಿದ್ದಾರೆ.
ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತವು 2023 ಆಗಸ್ಟ 15 ರಂದು ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಜಿಲ್ಲಾಡಳಿತದ ವತಿಯಿಂದ ಗದಗ-ಬೆಟಗೇರಿ ಅವಳಿ ನಗರದ 50 ಫಲಾನುಭವಿಗಳಿಗೆ ಕಾಯಿಪಲ್ಲೆ ಮಾರಾಟಾ ಹಾಗೂ ಹಣ್ಣು, ತರಕಾರಿ ವ್ಯಾಪಾರಿಗಳು ಬೀದಿಗಳಿಗೆ ತೆರಳಿ ವ್ಯಾಪಾರ ಮಾಡಲು ಹೈಟೆಕ್ ತಳ್ಳುವ ಗಾಡಿಗಳನ್ನು ಸಾಂಕೇತಿಕವಾಗಿ ವಿತರಿಸಿದರು.

ತಳ್ಳುಗಾಡಿಯಲ್ಲಿನ ಸೌಲಭ್ಯ :
ಬೀದಿಗಳಿಗೆ ಸಂಚರಿಸಿ ವ್ಯಾಪಾರ ಮಾಡಲು ಹೈಟೆಕ್ ತಳ್ಳುಗಾಡಿಗಳನ್ನು ತಯಾರಿಸಿ ನೀಡಲಾಗಿದೆ ಇದರಲ್ಲಿ ಬೆಳಕಿನ ವ್ಯವಸ್ಥೆಗೆ ಲೈಟ್ ಹಾಗೂ ಧ್ವನಿವರ್ಧಕ ಅಳವಡಿಸಲಾಗಿದೆ. ವ್ಯಾಪಾರದ ನಂತರ ತರಕಾರಿ ಹಾಗೂ ಹಣ್ಣುಗಳನ್ನು ಭದ್ರವಾಗಿ ಶೇಖರಿಸಲು ತಳ್ಳುಗಾಡಿಗಳ ಕೆಳಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅದರಂತೆ ತರಕಾರಿ ಕಟ್ಟೆಗಳಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ಪ್ರತ್ಯೇಕವಾಗಿ ಇರಿಸಲು ಮೆಟ್ಟಿಲುಗಳ ರೀತಿಯಲ್ಲಿ ತಯಾರಿಸಲಾಗಿದ್ದು ಇದರಿಂದ ವ್ಯಾಪರಸ್ಥರಿಗೆ ಹಾಗೂ ಖರೀದಿದಾರರಿಗೆ ಅನುಕೂಲಕರವಾಗಲಿದೆ.
ಸ್ವಾಭಿಮಾನದ ಬದುಕಿಗೆ ಎಚ್ಕೆಪಿ ಸಹಕಾರಿ:
ಬೀದಿ ಬದಿ ವ್ಯಾಪಾರಸ್ಥರು ಎಲ್ಲೆಂದರಲ್ಲಿ ಕುಳಿತು ವ್ಯಾಪಾರ ಮಾಡುವದನ್ನು ಮನಗಂಡು ಸಚಿವರಾದ ಎಚ್.ಕೆ. ಪಾಟೀಲ ಅವರು ವಿಶೇಷ ಮುತುವರ್ಜಿ ವಹಿಸಿ ಗುಣಮಟ್ಟದ ಕಾಯಿಪಲ್ಲೆ ಮಾರಾಟ ಕಟ್ಟೆ ಹಾಗೂ ತಳ್ಳುಗಾಡಿಗಳನ್ನು ತಯಾರಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಜಿಲ್ಲಾಡಳಿತದಿಂದ ಸುಸಜ್ಜಿತ ತಳ್ಳುಗಾಡಿ ಹಾಗೂ ಕಾಯಿಪಲ್ಲೆ ಮಾರಾಟ ಕಟ್ಟೆಗಳನ್ನು ತಯಾರಿಸಿ ನೀಡುವ ಮೂಲಕ ಬೀದಿಬದಿ ವ್ಯಾಪಾರಸ್ಥರ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾದವರು ಎಚ್.ಕೆ. ಪಾಟೀಲರು.
ಬೀದಿಬದಿ ವ್ಯಾಪಾರಸ್ಥರ ನಿಯಂತ್ರಣ ಕಾಯ್ದೆಯನ್ನು 2014ರಲ್ಲಿ ಕೇಂದ್ರದ ಯು.ಪಿ.ಎ. ನೇತೃತ್ವದ ಸರ್ಕಾರ ರಚಿಸಿತು. 2016 ರಲ್ಲಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಈ ಕಾಯ್ದೆ ಜಾರಿಗಾಗಿ ಗೆಜೆಟ್ ನೋಟಿಫಿಕೇಶನ ಹೊರಡಿಸಿತು. ಇದರಿಂದ ಸರ್ಕಾರ ಪಟ್ಟಣ ಮಾರಾಟ ಸಮಿತಿ ರಚಿಸಲು ಸೂಚನೇ ನೀಡಿದರ ಫಲವಾಗಿ 2019 ರಲ್ಲಿ ಸಮಿತಿಗಳು ರಚನೆಯಾದವು. ಬೀದಿಬದಿ ವ್ಯಾಪಾರಸ್ಥರ ಬದುಕು ಗುಣಮಟ್ಟದಿಂದ ಕೂಡಿರಬೇಕು. ಅವರು ಸಹ ಎಲ್ಲರಂತೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದೊಂದಿಗೆ ಕಾಯ್ದೆ ತರಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲರು ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಸಾಂಕೇತಿಕವಾಗಿ 50 ಫಲಾನುಭವಿಗಳಿಗೆ ತರಕಾರಿ ಕಟ್ಟೆ ಹಾಗೂ ಹೈಟೆಕ್ ತಳ್ಳುಗಾಡಿಗಳನ್ನು ವಿತರಿಸಿರುವದು ಸಂತಸ ತಂದಿದೆ.
– ಬಾಷಾಸಾಬ ಮಲ್ಲಸಮುದ್ರ,
ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾಮಂಡಳದ ರಾಜ್ಯ ಉಪಾದ್ಯಕ್ಷ.

ಪ್ರತಿದಿನ ಬೀದಿ-ಬೀದಿ ಸುತ್ತುತ್ತಾ ಕೂಗಿ ಹಣ್ಣು ಹಾಗೂ ತರಕಾರಿಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈ ಹೈಟೆಕ್ ತಳ್ಳುಗಾಡಿ ಇಂದಾಗಿ ದಿನದಿಂದ ದಿನಕ್ಕೆ ವ್ಯಾಪಾರವು ವೃದ್ಧಿಯಾಗುತ್ತಿದೆ. ಜೊತೆಗೆ ವ್ಯವಸ್ಥಿತ ಮಾರಾಟಕ್ಕೆ ಅನುಕೂಲ ಕಲ್ಪಿಸಿದ ಎಚ್.ಕೆ.ಪಾಟೀಲ ಸಾಹೇಬರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.
-ವ್ಯಾಪಾರಸ್ಥರು.
ಈ ವಿಶೇಷ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿಗಳಾದ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಬಿ.ಎಸ್.ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗಂಗಾಧರ ಶಿರೋಳ, ಗಣ್ಯರು, ಫಲಾನುಭವಿಗಳು ಉಪಸ್ಥಿತಿತರಿದ್ದರು.

