ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಹಿಳೆಯರ ಉಚಿತ ಬಸ್ ಪ್ರಯಾಣ ಸೌಲಭ್ಯವು ಶೀಘ್ರದಲ್ಲಿಯೇ ಕೊನೆಗೊಳ್ಳಲಿದೆ ಎಂಬ ನಕಲಿ ಸುದ್ದಿಯು ಸಾಕಷ್ಟು ಕಡೆಗಳಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಸ್ವತಃ ಕೆಎಸ್ಆರ್ಟಿಸಿ ಸ್ಪಷ್ಟನೆ ನೀಡಿದ್ದು, ಅಂತಹ ಯಾವುದೇ ನಿರ್ಧಾರ ಸಾರಿಗೆ ಸಂಸ್ಥೆಗಳು ಅಥವಾ ಸರ್ಕಾರ ಮಾಡಿಲ್ಲ. ಈ ಬಗ್ಗೆ ಮಹಿಳೆಯರು ಆತಂಕ ಪಡುವುದು ಬೇಡ ಎಂದು ತಿಳಿಸಿದೆ.

ಏನೆಲ್ಲಾ ಗಾಳಿ ಸುದ್ದಿ ಹರಿದಾಡುತ್ತಿವೆ..?
ಶಕ್ತಿ ಯೋಜನೆಗೆ ಹೈಕೋರ್ಟ್ ತಡೆ ನೀಡಿದೆ, ಈ ಕಾರಣದಿಂದ ಆಗಸ್ಟ್ 15ರಿಂದ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ರದ್ದಾಗಲಿದೆ’ ಎಂಬ ವಿವರ ಇರುವ ಸಂದೇಶಗಳು ವಾಟ್ಸಪ್ ಮತ್ತು ಫೇಸ್ಬುಕ್ನಲ್ಲಿ ಹರಿದಾಟುತ್ತಿವೆ.
ಇದರೊಂದಿಗೆ ‘ಆಗಸ್ಟ್ 15ರಿಂದ ಫ್ರೀ ಬಸ್ ಪ್ರಯಾಣ ರದ್ದು? ಹೈಕೋರ್ಟ್ ತಡೆ’ ಎಂಬ ಬರಹವಿರುವ ಫೋಟೋಗಳು, ಸ್ಕ್ರೀನ್ ಶಾಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಶಕ್ತಿ ಯೋಜನೆ ರದ್ದಾಗಿರುವ ಬಗ್ಗೆ ಹಲವು ಮೀಮ್ಸ್ಗಳು ಕೂಡಾ ಫೇಸ್ಬುಕ್, ಟ್ವಿಟ್ಟರ್ , ವ್ಯಾಟ್ಸಪ್ ಸ್ಟೇಟಸ್ಗಳಲ್ಲಿ ಹರಿದಾಡುತ್ತಿವೆ.
ಕೆಎಸ್ಆರ್ಟಿಸಿ ಅಧಿಕಾರಿಗಳು ಏನಂತಾರೆ..?
ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆ ಕೊನೆಗೊಳ್ಳಲಿದ್ದು,
ಮಹಿಳೆಯರಿಗೆ ಒದಗಿಸುತ್ತಿರುವ ಉಚಿತ ಪ್ರಯಾಣ ಶೀಘ್ರದಲ್ಲಿಯೇ ಸ್ಥಗಿತಗೊಳ್ಳಲಿದೆ ಎಂಬುದಾಗಿ ಸುದ್ದಿಯನ್ನು ಪ್ರಕಟಿಸುತ್ತಿರುವುದು ಸತ್ಯಕ್ಕೆ ದೂರವಾದ ವಿಷಯವಾಗಿರುತ್ತದೆ. ಈ ಬಗ್ಗೆ ಸಾಕಷ್ಟು ಮಂದಿ ವಿಚಾರ ಮಾಡುತ್ತಿದ್ದಾರೆ. ಈ ರೀತಿಯ ಯಾವುದೇ ಗೊಂದಲದ ಸಂದೇಶಗಳನ್ನು ಸಾರ್ವಜನಿಕ ಪ್ರಯಾಣಿಕರು ನಂಬಬಾರದು. ಈ ಬಗ್ಗೆ ನಾವು ಸಾರ್ವಜನಿಕರಿಗೆ ಕಾಲಕಾಲಕ್ಕೆ ಸಮರ್ಪಕವಾದ ಮಾಹಿತಿಯನ್ನು ಒದಗಿಸುತ್ತೇವೆ ಎಂದು ಕೆಎಸ್ಆರ್ಟಿಸಿ ಸಾರ್ವಜನಿಕ ಸಂಪರ್ಕ ವಿಭಾಗದ ಅಧಿಕಾರಿ ಹೇಳುತ್ತಾರೆ.

