ಸಾಕ್ಷರತೆ ಕನಸು ಸಾಕಾರಗೊಳಿಸುವುದು ಇಲಾಖೆ ಅಧಿಕಾರಿಗಳ ಜವಾಬ್ದಾರಿ : ಸಚಿವ ಎಚ್.ಕೆ.ಪಾಟೀಲ

ಸಮಗ್ರ ಪ್ರಭ ಸುದ್ದಿ
2 Min Read

ಗದಗ : ರಾಜ್ಯ ಸರ್ಕಾರದಿಂದ ವಸತಿ ನಿಲಯಗಳಿಗೆ ಬೇಕಾದಂತಹ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು ಅದಕ್ಕೆ ತಕ್ಕಂತೆ ವಸತಿ ನಿಲಯದ ವಿಧ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವದರ ಮೂಲಕ ಸಾಕ್ಷರತೆ ಕನಸು ಸಾಕಾರಗೊಳಿಸುವಂತೆ ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಸೂಚಿಸಿದರು.

ನಗರದ ಇಂದಿರಾಗಾಂಧಿ ನರ್ಸಿಂಗ್ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಸೋಮವಾರದಂದು ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಪ್ರತಿಯೊಂದು ವಸತಿ ನಿಲಯಗಳು ಸುಸಜ್ಜಿತ ಗ್ರಂಥಾಲಯಗಳನ್ನು ಹೊಂದುವದರ ಮೂಲಕ ವಿಧ್ಯಾರ್ಥಿಗಳಿಗೆ ಉನ್ನತ ಮಟ್ಟದ ಜ್ಞಾನಾರ್ಜನೆ ದೊರಕುವಂತಾಗಬೇಕು ಎಂದರು.

ವಸತಿ ನಿಲಯದ ವಿದ್ಯಾರ್ಥಿಗಳಿಗೆ ಕ್ರೀಡಾ ಸಲಕರಣೆಗಳು ಲಭ್ಯವಾಗುವಂತೆ ನೋಡಕೊಳ್ಳಬೇಕು. ವಸತಿ ನಿಯಗಳಲ್ಲಿ ವಿಧ್ಯಾರ್ಥಿಗಳಿಗೆ ಅಭ್ಯಾಸದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ನಿಗಾವಹಿಸಬೇಕು. ಅಲ್ಲದೇ ವಸತಿ ನಿಲಯಗಳಲ್ಲಿ ವಿಧ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಪೂರೈಕೆಗೆ ಆದ್ಯತೆ ನೀಡುವದರ ಜೊತೆಗೆ ವಸತಿ ನಿಲಯದ ಶ್ರೇಯೋಭಿವೃದ್ಧಿಗೆ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುವ ವಸತಿ ಪಾಲಕರು ಶ್ರಮಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿನ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಸೌಲಭ್ಯ ದೊರಕುವಂತಾಗಬೇಕು. ಜಿಲ್ಲೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಸಾಕ್ಷರತೆಯ ಕನಸು ನಮ್ಮದಾಗಿದ್ದು ಅದನ್ನು ಸಾಕಾರಗೊಳಿಸುವುದು ಇಲಾಖೆಯ ಅಧಿಕಾರಿಗಳ ಮುಖ್ಯ ಜವಾಬ್ದಾರಿಯಾಗಿದೆ ಎಂದು ಸಲಹೆ ಮಾಡಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರವಿ ಗುಂಜಿಕಾರ ಅವರು ಮಾತನಾಡಿ ಗದಗ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪ್ರಸ್ತುತ ಸಾಲಿನಲ್ಲಿ 32 ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು ಹಾಗೂ 30 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. 21 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳಲ್ಲಿ 1380 ವಿದ್ಯಾರ್ಥಿಗಳು ಹಾಗೂ 8 ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ 460 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿರುತ್ತಿದ್ದಾರೆ. 32 ವಿದ್ಯಾರ್ಥಿ ನಿಲಯಗಳಲ್ಲಿ 1840 ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ. ವಿದ್ಯಾರ್ಥಿ ವಸತಿನಿಲಯದಲ್ಲಿ ವಿವಿಧ ತರಬೇತಿಗಳನ್ನು ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು ವಿದ್ಯಾರ್ಥಿನಿಲಯದ ನಿರ್ವಹಣೆ ಕಾರ್ಯಕ್ರಮ ಹಾಗೂ ಕಾರ್ಯ ಸ್ವರೂಪವನ್ನು ಪಿಪಿಟಿ ಮುಖಾಂತರ ಸಭೆಗೆ ವಿವರಿಸಿ ಮಾತನಾಡಿದರು.

ತದನಂತರ ಸಚಿವರು ವಸತಿ ನಿಲಯದ ಅಡುಗೆ ಕೋಣೆ, ಆಹಾರ ಪದಾರ್ಥಗಳ ದಾಸ್ತಾನು ಕೊಠಡಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ವಿಧ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ ವಸತಿ ನಿಲಯದಲ್ಲಿ ಒದಗಿಸಲಾಗುವ ಸೌಲಭ್ಯ ಹಾಗೂ ಆಹಾರದ ಗುಣಮಟ್ಟದ ಕುರಿತು ಮಾಹಿತಿ ಪಡೆದರು.

Share this Article