ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ, ಔಷಧೀಯ ಸಸ್ಯಗಳ ಕಣಜ ಜಿಲ್ಲೆಯ ಕಪ್ಪತ್ತಗುಡ್ಡದ ಹಸಿರು ಸೊಬಗನ್ನು ಕಣ್ತುಂಬಿಕೊಳ್ಳಲು ಅರಣ್ಯ ಇಲಾಖೆಯು ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕರಿಗೆ ಚಾರಣದ ಅವಕಾಶ ಕಲ್ಪಿಸಿದೆ.
ಅರಣ್ಯ ಇಲಾಖೆಯು ಕಪ್ಪತಗುಡ್ಡ ಚಾರಣ(ಟ್ರೆಕ್ಕಿಂಗ್) ಬನ್ನಿ, ನಮ್ಮ ಉತ್ತರ ಕರ್ನಾಟಕದ ಸಹ್ಯಾದ್ರಿಯನ್ನು ಅನ್ವೇಷಿಸಿ ಎಂಬ ವಾಕ್ಯದೊಂದಿಗೆ ಆ. 5ರಂದು ಪ್ರಥಮ ಬಾರಿಗೆ ಟ್ರೆಕ್ಕಿಂಗ್ ಆರಂಭಿಸಿದೆ. ಆ. 5ರಂದು ಬೆಳಿಗ್ಗೆ 6ರಿಂದ ಟ್ರೆಕ್ಕಿಂಗ್ ಆರಂಭಿಸಿದ್ದು, ಈಗಾಗಲೇ ಹಲವು ಜಿಲ್ಲೆಗಳ ಚಾರಣಿಗರು ಸೇರಿ ಜಿಲ್ಲೆಯ ಮುಂಡರಗಿ, ಲಕ್ಕುಂಡಿಯ ಜನರು ಕೂಡ ಫೋನ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಕಪ್ಪತಗುಡ್ಡದಲ್ಲಿ 4 ಕಿ.ಮೀ. ಉದ್ದದ ಮಾರ್ಗದ 2 ಚಾರಣದ ಪಥಗಳಿದ್ದು, ಚಾರಣದಲ್ಲಿ ಗುಡ್ಡ ಹತ್ತುವುದು, ಇಳಿಯುವುದು, ಉತ್ತರ ವಾತಾವರಣದ ಅನುಭವ ಪಡೆಯುವುದು, ಪ್ರಕೃತಿ ಸೌಂದರ್ಯವನ್ನು ಸವಿಯುವುದರ ಜೊತೆಗೆ ಅದೃಷ್ಟವಿದ್ದರೆ ವನ್ಯಜೀವಿಗಳನ್ನು ವೀಕ್ಷಿಸಬಹುದಾಗಿದೆ.
ಅರಣ್ಯ ಇಲಾಖೆಯು ಕಪ್ಪತಗುಡ್ಡದ ಕಡಕೋಳ ಹಾಗೂ ಡೋಣಿ ಬಳಿ ಎರಡು ಮಾರ್ಗಗಳಿಂದ ಟ್ರೆಕ್ಕಿಂಗ್ ಪಥವನ್ನು ಸಂಯೋಜಿಸಲಾಗಿದ್ದು, ಕಡಕೋಳ ಕಡಕೋಳ ವೀವ್ ಪಾಯಿಂಟ್, ಕಡಕೋಳ ಕಪ್ಪತ ಮಲ್ಲೇಶ್ವರ ದೇವಸ್ಥಾನ ಗಾಳಿಗುಂಡಿ ವೀವ್ ಪಾಯಿಂಟ್ ಮಾರ್ಗವಾಗಿ ಕೊನೆಯದಾಗಿ ಕಡಕೋಳ ದೈವೀವನದಲ್ಲಿ ಮುಕ್ತಾಯಗೊಳ್ಳಲಿದೆ.