ಟೊಮೆಟೊ ಬೆಳೆ ನಾಶ ಮಾಡಿದ ದುಷ್ಕರ್ಮಿಗಳು; ₹15 ಲಕ್ಷಕ್ಕೂ ಹೆಚ್ಚು ನಷ್ಟ

ಸಮಗ್ರ ಪ್ರಭ ಸುದ್ದಿ
1 Min Read

ಚಾಮರಾಜನಗರ: ತಾಲ್ಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ಮಂಜು ಎಂಬ ರೈತರು ಬೆಳೆದಿದ್ದ ಟೊಮೆಟೊ ಬೆಳೆಯನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಬೆಳೆದಿದ್ದ ಗಿಡಗಳನ್ನು ಬುಡಸಮೆತವಾಗಿ ಕತ್ತರಿಸಿ ನಾಶ ಮಾಡಿದ್ದಾರೆ.

ಇನ್ನು ಏಳೆಂಟು ದಿನಗಳಲ್ಲಿ ಕಟಾವು ಮಾಡುವ ಹಂತದಲ್ಲಿ ಎರಡು ಎಕರೆಯಲ್ಲಿ ರೈತ ಮಂಜು ಟೊಮೆಟೊ ಬೆಳೆದಿದ್ದರು.
ಅದರಲ್ಲಿ ಒಂದು ಎಕರೆಯಲ್ಲಿ ಬೆಳೆದಿದ್ದ ಟೊಮೆಟೊ ಗಿಡಗಳ ಬುಡವನ್ನು ಕತ್ತರಿಸಿದ್ದಾರೆ. ದ್ವೇಷ ಇಲ್ಲವೇ ಹೊಟ್ಟೆಕಿಚ್ಚಿನಿಂದ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈಗಿನ ಬೆಲೆಯಲ್ಲಿ ಟೊಮೆಟೊ ಮಾರಾಟ ಮಾಡಿದ್ದರೆ ₹ 15 ಲಕ್ಷದಿಂದ ₹ 20 ಲಕ್ಷದವರೆಗೆ ಆದಾಯ ಬರುತ್ತಿತ್ತು.

ರೈತ ಮಂಜು ಸುಮಾರು ಎರಡು ಲಕ್ಷ ರೂಪಾಯಿ ಖರ್ಚು ಮಾಡಿದ್ದನು ದುಡ್ಡು ಹೊಂದಿಸಲು ಚಿನ್ನ ಅಡವಿಟ್ಟಿದ್ದೆ. ಸಂಘಗಳಲ್ಲಿ ಸಾಲ ಮಾಡಿದ್ದೆ. ವ್ಯಾಪಾರಿಗಳು ಬಂದು ಟೊಮೆಟೊವನ್ನು ಪರಿಶೀಲಿಸಿದ್ದರು. ಇನ್ನು ಕೆಲವೇ ದಿನಗಳಲ್ಲಿ ಕಟಾವು ಮಾಡುತ್ತಿದ್ದೆವು. ಬುಧವಾರ ರಾತ್ರಿ ಒಂಬತ್ತು ಗಂಟೆವರೆಗೂ ತೋಟದಲ್ಲೇ ಇದ್ದೆ. ಆ ನಂತರ ಮನೆಗೆ ತೆರಳಿದೆ. ಬೆಳಿಗ್ಗೆ ಬಂದು ನೋಡುವಾಗ ಗಿಡಗಳು ಬಾಡಿವೆ. ನೋಡಿದರೆ ಗಿಡಗಳನ್ನು ಕತ್ತರಿಸಲಾಗಿದೆ. ಯಾರೋ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ರೈತ ಮಂಜುನಾಥ್‌ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡರು.

‘ಈಗ ಟೊಮೆಟೊಗೆ ಉತ್ತಮ ಬೆಲೆ ಇದ್ದು ₹ 20 ಲಕ್ಷದಷ್ಟು ಬರಬಹುದು ಎಂದುಕೊಂಡಿದ್ದೆ. ಎಲ್ಲವೂ ಹಾಳಾಗಿದೆ. ನನಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ನೇಣು ಹಾಕಿಕೊಳ್ಳಬೇಕಾಗುತ್ತದೆ’ ಎಂದು ಮಂಜು ಹೇಳಿದರು.

ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಠಾಣಾ ವ್ಯಾಪ‍್ತಿಯಲ್ಲಿ ಘಟನೆ ನಡೆದಿದ್ದು, ಅಲ್ಲಿನ ಇನ್‌ಸ್ಪೆಕ್ಟರ್‌ ಚಿಕ್ಕರಾಜಶೆಟ್ಟಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್‌ ಶ್ವಾನ ದಳವೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದೆ.

‘ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ದೂರು ದಾಖಲಿಸಲಾಗಿದೆ. ಒಂದು ಎಕರೆಯಷ್ಟು ಟೊಮೆಟೊ ಬೆಳೆ ನಾಶವಾಗಿದೆ. ತನಿಖೆ ಆರಂಭಿಸಿದ್ದೇವೆ’ ಎಂದು ಪ್ರಭಾರ ಇನ್‌ಸ್ಪೆಕ್ಟರ್‌ ಚಿಕ್ಕರಾಜಶೆಟ್ಟಿ ತಿಳಿಸಿದ್ದಾರೆ.

Share this Article