ರಾಮನಗರ: ಆನ್ ಲೈನ್ ವಂಚನೆಗಳು ರಾಜ್ಯದಲ್ಲಿ ಹೆಚ್ಚುತ್ತಿದ್ದು, ಮೋಸ ಹೋಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಫೇಸ್ ಬುಕ್ ನಲ್ಲಿ ಬಂದಿದ್ದ ಫೇಕ್ ಪ್ರೊಫೈಲ್ ನಿಂದ ಬಂದಿದ್ದ ಮೆಸ್ಸೇಜ್ ಅನ್ನು ನಂಬಿ ಪ್ರತಿಕ್ರಿಯಿಸಿದ ಯುವಕನೊಬ್ಬ ಬರೋಬ್ಬರಿ 41 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ರಾಮನಗರ ಜಿಲ್ಲೆಯಿಂದ ವರದಿಯಾಗಿದೆ.
ರಾಮನಗರ ಜಿಲ್ಲೆ ಕನಕಪುರ ಯುವಕ ರಾಜೇಶ್ ಪಿ ಎಂಬಾತನೇ ವಂಚನೆಗೆ ಒಳಗಾದ ಯುವಕ. ಸುಮಾರು 6 ತಿಂಗಳ ಹಿಂದೆ ಆತನಿಗೆ ಫೇಸ್ ಬುಕ್ ನಲ್ಲಿ `ಗೀತಾ ಸೆಕ್ಸಿ’ ಎಂಬ ಪ್ರೊಫೈಲ್ ನಿಂದ ಡೇಟಿಂಗ್ ಮೆಸ್ಸೇಜ್ ಬಂದಿತ್ತು. ಅದನ್ನು ನಂಬಿ ರಾಜೇಶ್ ಪ್ರತಿಕ್ರಿಯಿಸಿದ್ದಾನೆ.
ಕನಕಪುರಕ್ಕೆ ಹುಡುಗಿ ಕಳುಹಿಸಲಾಗುವುದು. ಹುಡುಗಿ ಬೇಕಾದ್ರೆ 800 ರೂಪಾಯಿ ಜತೆಗೆ ಫೊಟೊ ಕಳುಹಿಸಬೇಕೆಂದು ಫೇಕ್ ಪ್ರೊಫೈಲ್ ನಿಂದ ಸಂದೇಶ ಬಂದಿತ್ತು. ಅದರಂತೆ ರಾಜೇಶ್ ತನ್ನ ಫೊಟೊ ಜತೆ 800 ಕಳುಹಿಸಿದ್ದ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಸೈಬರ್ ವಂಚಕರು ರಾಜೇಶ್ ನ ಪೋಟೊವನ್ನು ಎಡಿಟ್ ಮಾಡಿ ನಗ್ನಗೊಿಸಿದ ಫೋಟೋವನ್ನು ಹಿಂದಕ್ಕೆ ಕಳಿಸಿದ್ದಾರೆ. ಕೇಳಿದಷ್ಟು ಹಣ ಕೊಡದಿದ್ದರೆ ಈ ಫೋಟೋವನ್ನು ಫೇಸ್ ಬುಕ್ಕಿಗೆ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಹೀಗೆ ಕಳೆದ ಆರು ತಿಂಗಳಿನಿಂದ 41 ಲಕ್ಷ ರೂಪಾಯಿ ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ. ಅವರು ಕೇಳಿದ ಹಾಗೆಲ್ಲ ರಾಜೇಶ್ ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಕಳುಹಿಸಿಕೊಟ್ಟಿದ್ದ. ಇನ್ನೇನು ಇವರ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದಾದಾಗ ರಾಮನಗರ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.