ಕುಂದಾಪುರ: ಕೊಲ್ಲೂರಿನ ಅರಶಿನ ಗುಂಡಿ ಜಲಪಾತ ವೀಕ್ಷಣೆ ಮಾಡಲು ಹೋಗಿ ಜಾರಿ ಬಿದ್ದು ನೀರುಪಾಲಾಗಿದ್ದ ಭದ್ರಾವತಿ ಮೂಲದ ಯುವಕ ಶರತ್ ಮೃತದೇಹ ವಾರದ ಬಳಿಕ ಪತ್ತೆಯಾಗಿದೆ.
ಜುಲೈ 23ರಂದು ಕೊಲ್ಲೂರು ಸಮೀಪದ ಅರಣ್ಯ ಪ್ರದೇಶದಲ್ಲಿರುವ ಅರಶಿನ ಗುಂಡಿ ಜಲಪಾತ ನೋಡಲು 23 ವರ್ಷದ ಶರತ್ ಕುಮಾರ್ ಸ್ನೇಹಿತನೊಂದಿಗೆ ಹೋಗಿದ್ದರು. ಜಲಪಾತದ ಪಕ್ಕದ ಬಂಡೆ ಕಲ್ಲಿನ ಮೇಲೆ ನಿಂತಿದ್ದು ಅವರು ಜಾರಿ ನೀರಿಗೆ ಬಿದ್ದಿದ್ದರು.
ಶರತ್ ಹುಡುಕಾಟಕ್ಕೆ ಹಲವು ತಂಡಗಳು ವಾರಗಳ ಕಾಲ ಶ್ರಮ ವಹಿಸಿದ್ದವು. ಆದರೆ ತೀವ್ರ ಮಳೆ ಮತ್ತು ನೀರಿನ ರಭಸದ ಕಾರಣದಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿತ್ತು. ಇದೀಗ ವಾರದ ಬಳಿಕ ಜುಲೈ 30ರಂದು ಬಿದ್ದ ಜಾಗದಿಂದ ಹತ್ತು ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಕೊಲ್ಲೂರು ಪೊಲೀಸರು, ರಾಜ್ಯ ವಿಪತ್ತು ನಿರ್ವಹಣ ತಂಡ (ಎಸ್‌ಡಿಆರ್‌ಎಫ್), ಅರಣ್ಯ ಇಲಾಖೆ ಸಿಬಂದಿ, ಅಗ್ನಿ ಶಾಮಕ ದಳದ ಸಿಬಂದಿ, ಸ್ಥಳೀಯರು, ಶರತ್ ಅವರ ಸ್ನೇಹಿತರು, ಸಂಬಂಧಿಕರು ಪ್ರತೀ ದಿನ ಹಗಲಿಡೀ ನಿರಂತರ ಹುಡುಕಾಟ ನಡೆಸಿದ್ದರು. ಈಶ್ವರ್ ಮಲ್ಪೆ, ಜ್ಯೋತಿರಾಜ್ ತಂಡವೂ ಹುಡುಕಾಟ ನಡೆಸಿತ್ತು.
ಶರತ ಪತ್ತೆಗಾಗಿ ಜಲಪಾತ ಹರಿದು ಬರುವ ಬೇರೆ ಬೇರೆ ಕಡೆಗಳಲ್ಲಿ ಸಾಗರ ಬಾರಕೂರು ಅವರ ನೇತೃತ್ವದಲ್ಲಿ ಡ್ರೋನ್ ಕೆಮರಾದ ಮೂಲಕ ಹುಡುಕುವ ಪ್ರಯತ್ನ ಮಾಡಲಾಗಿತ್ತು.