ಬೆಂಗಳೂರು : ಹಾಲು, ದಿನಸಿ ಸೇರಿದಂತೆ ಇತರೆ ಬೆಲೆಗಳ ಏರಿಕೆ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿಎಲ್ಲಾ ತಿಂಡಿ, ತಿನಿಸುಗಳ ದರವನ್ನು ಶೇ. 10ರಷ್ಟು ಹೆಚ್ಚಿಸಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ಪರಿಷ್ಕೃತ ದರವು ಆಗಸ್ಟ್‌ನಿಂದ ಜಾರಿಯಾಗಲಿದೆ.
ಕಾಫಿ, ಟೀ, ಉಪಾಹಾರ, ಊಟ, ಚಾಟ್ಸ್ ಸೇರಿದಂತೆ ಎಲ್ಲಆಹಾರ ಪದಾರ್ಥಗಳ ದರ ಶೇ. 10ರಷ್ಟು ಹೆಚ್ಚಾಗಲಿದೆ. ಕಾಫಿ, ಟೀ ದರವು 2 ರಿಂದ 3 ರೂ.ವರೆಗೆ ಜಾಸ್ತಿಯಾಗಲಿದೆ. ಹಾಗೆಯೇ, ದೋಸೆ, ಇಡ್ಲಿ, ವಡೆ, ರೈಸ್‌ಬಾತ್, ಬಿಸಿಬೇಳೆ ಬಾತ್, ಚೌಚೌ ಬಾತ್ ಮತ್ತಿತರ ತಿಂಡಿಗಳ ಬೆಲೆಯೂ 5 ರೂ.ನಷ್ಟು ಹೆಚ್ಚಾಗಲಿದೆ. ಊಟದ ದರವನ್ನು 5 ರಿಂದ 10 ರೂ.ವರೆಗೆ ಏರಿಕೆ ಮಾಡಲು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ತೀರ್ಮಾನಿಸಿದೆ.
ಸಿಲಿಂಡರ್ ದರ, ವಿದ್ಯುತ್ ಶುಲ್ಕ ಏರಿಕೆ:
” ದಿನಸಿ, ಹಾಲು, ತುಪ್ಪ, ಬೆಣ್ಣೆ, ಪನ್ನೀರ್, ಅಡುಗೆ ಅನಿಲ ಸಿಲಿಂಡರ್ ದರ ಏರಿಕೆಯಾಗುತ್ತಲೇ ಇದೆ. ಜತೆಗೆ ತರಕಾರಿಗಳ ಬೆಲೆಯೂ ಜಾಸ್ತಿಯಾಗುತ್ತಿದೆ. ಅಲ್ಲದೇ ಕಾರ್ಮಿಕರ ವೇತನ, ವಿದ್ಯುತ್ ಶುಲ್ಕ, ಬಾಡಿಗೆ, ನಿರ್ವಹಣೆ ವೆಚ್ಚವೂ ಹೆಚ್ಚಾಗಿದೆ. ಹಾಗಾಗಿ, ಗ್ರಾಹಕರಿಗೆ ಹೆಚ್ಚು ಹೊರೆಯಾಗದಂತೆ ಊಟ, ತಿಂಡಿ ದರವನ್ನು ಶೇ.10ರಷ್ಟು ಏರಿಕೆ ಮಾಡಲು ನಿರ್ಧರಿಸಲಾಗಿದೆ,” ಎಂದು ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದರು.