ಬೆಂಗಳೂರು: ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದಾಗಿ ರಾಜ್ಯಕ್ಕೆ ಅಗತ್ಯವಾದಂತಹ ನೂತನ ಶಿಕ್ಷಣ ನೀತಿಯನ್ನು ರೂಪಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಹಿಂದೆ ತೀವ್ರ ವಿರೋಧದ ನಡುವೆಯೂ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ನೂತನ ಶಿಕ್ಷಣ ನೀತಿಯನ್ನು ಜಾರಿ ಮಾಡಿದೆ. ಈ ಮೂಲಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿರುವುದು ಅವರೇ ಎಂದು ತಿರುಗೇಟು ನೀಡಿದ್ದಾರೆ.
ನಾವು ಚುನಾವಣೆಯ ವೇಳೆಯಲ್ಲೇ ಭರವಸೆ ನೀಡಿದಂತೆ ರಾಜ್ಯಕ್ಕೆ ಅಗತ್ಯವಾದಂತಹ ಶಿಕ್ಷಣ ನೀತಿಯನ್ನು ಘೋಷಿಸುತ್ತೇವೆ. ಎನ್‍ಇಪಿಯನ್ನು ರದ್ದು ಮಾಡುತ್ತೇವೆ ಎಂದು ವ್ಯಾಖ್ಯಾನಿಸುವುದು ಅನಗತ್ಯ. ನಮ್ಮ ಮಕ್ಕಳ ಶಿಕ್ಷಣ ವ್ಯವಸ್ಥೆ ನಮ್ಮ ಕೈಯಲ್ಲಿರಬೇಕು. ಅದಕ್ಕೆ ಪೂರಕವಾಗಿ ಒಂದಿಷ್ಟು ಮಾರ್ಪಾಡುಗಳನ್ನು ಮಾಡಲಾಗುವುದು ಎಂದು ಹೇಳಿದರು.
ರಾಜ್ಯಕ್ಕೆ ಪೂರಕವಾದ ಶಿಕ್ಷಣ ನೀತಿ ರೂಪಿಸುವ ಸಲುವಾಗಿ ಆಗಸ್ಟ್ 2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉನ್ನತ ಶಿಕ್ಷಣ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವರ ಸಭೆ ನಡೆಸಬೇಕಿತ್ತು. ಆದರೆ ಅಂದು ಮುಖ್ಯಮಂತ್ರಿಯವರು ದೆಹಲಿ ಪ್ರವಾಸ ಕೈಗೊಳ್ಳುವುದರಿಂದ ಮುಂದೊಂದು ದಿನ ಸಭೆ ನಡೆಸಲಾಗುವುದು ಎಂದರು.
ನಾವು ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಪಠ್ಯ ಪರಿಷ್ಕರಣೆ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಹಲವಾರು ವಿವಾದಗಳನ್ನು, ಚರ್ಚೆಗಳನ್ನು ಹುಟ್ಟುಹಾಕಿದ್ದೇ ಬಿಜೆಪಿಯವರು. ನಾವು ಶಿಕ್ಷಣದಲ್ಲಿ ಪಕ್ಷ, ರಾಜಕೀಯ, ಸಿದ್ದಾಂತಗಳನ್ನು ನೋಡುವುದಿಲ್ಲ. ನಮ್ಮ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವಂತಹ ಶಿಕ್ಷಣ ನೀಡುವುದಷ್ಟೇ ನಮ್ಮ ಆದ್ಯತೆ.
ಉತ್ತರಭಾಗ, ಈಶಾನ್ಯ ಭಾಗ ಸೇರಿದಂತೆ ಅನೇಕ ಪ್ರಾದೇಶಿಕ ವ್ಯತ್ಯಾಸಗಳಿವೆ. ರಾಷ್ಟ್ರೀಯ ಶಿಕ್ಷಣ ನೀತಿ ಈ ಎಲ್ಲವುಗಳಿಗೂ ಸಮರ್ಪಕವಾದ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸ್ವಂತ ಹಾಗೂ ತನ್ನದೇ ಆದ ನೀತಿಗೆ ಚಿಂತನೆ ನಡೆಸಿದೆ ಎಂದರು.