ಲೋಕಾಯುಕ್ತ ದಾಳಿ ವೇಳೆ 500 ರೂ.ಬೆಲೆಯ 10 ನೋಟು ನುಂಗಿದ ಕಂದಾಯ ಇಲಾಖೆ ಅಧಿಕಾರಿ

ಸಮಗ್ರ ಪ್ರಭ ಸುದ್ದಿ
1 Min Read

ಭೂಪಾಲ್: ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬೀಳುವುದನ್ನು ತಪ್ಪಿಸಿಕೊಳ್ಳುವ ಭರದಲ್ಲಿ ಕಂದಾಯ ಇಲಾಖೆಯ ಅಧಿಕಾರಿಯೊಬ್ಬ 5 ಸಾವಿರ ರೂ. ನೋಟುಗಳನ್ನು ನುಂಗಿರುವ ಘಟನೆ ಮಧ್ಯಪ್ರದೇಶದಲ್ಲಿ ಮಂಗಳವಾರ ನಡೆದಿದೆ. ಕತ್ನಿ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಪತ್ವಾರಿ ಕೆಲಸ ಮಾಡುತ್ತಿದ್ದ ಗಜೇಂದ್ರ ಸಿಂಗ್ ಎಂಬಾತನೇ 5 ಸಾವಿರ ರೂ. ನೋಟುಗಳನ್ನು ನುಂಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭೂವ್ಯಾಜ್ಯಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲು ಕಂದಾಯ ಇಲಾಖಾಧಿಕಾರಿ ಗಜೇಂದ್ರ ಸಿಂಗ್ ಎಂಬುವರು ಚಂದನ್ ಸಿಂಗ್‍ಲೋದಿ ಎಂಬುವರಿಂದ 5 ಸಾವಿರ ರೂ. ಲಂಚಕ್ಕೆ ಭೇಟಿ ಇಟ್ಟಿದ್ದರು.
ಇದರಂತೆ ಚಂದನ್ ಸಿಂಗ್‍ಲೋದಿ ಕಂದಾಯ ಅಧಿಕಾರಿಗೆ 5 ಸಾವಿರ ರೂ. ಲಂಚ ನೀಡಿದ್ದ. ಹಣ ನೀಡುವ ಮೊದಲು ಆತ ಜಬ್ಬಲ್‍ಪುರ ಲೋಕಾಯುಕ್ತ ಪೊಲೀಸರಿಗೆ ದೂರು ಕೊಟ್ಟಿದ್ದ. ಕಂದಾಯ ಅಧಿಕಾರಿಯನ್ನು ರೆಡ್‍ಹ್ಯಾಂಡ್ ಆಗಿ ಹಿಡಿಯಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಯಾವಾಗ ಲಂಚದ ಹಣವನ್ನು ಅಧಿಕಾರಿ ಕೈಗೆ ಇಡುತ್ತಿದ್ದಂತೆ ತಕ್ಷಣವೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಇನ್ನೇನು ಸಿಕ್ಕಿಬೀಳುತ್ತೇನೆ ಎಂಬ ಭಯದಲ್ಲಿ ಈತ 500 ರೂ. ಇದ್ದ 10 ನೋಟುಗಳನ್ನು ನೋಡನೋಡುತ್ತಲೇ ಮಕ್ಕಳು ಚಾಕ್ಲೆಟ್ ತಿಂದು ನುಂಗುವಂತೆ ಇಡೀ ನೋಟುಗಳನ್ನೇ ಸುರಳಿ ಸುತ್ತಿಕೊಂಡು ನುಂಗತೊಡಗಿದ.

ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಬಾಯಿಗೆ ಪೈಪ್ ಹಾಕಿ ನೋಟುಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

Share this Article