ಹುಬ್ಬಳ್ಳಿ: ಮಹಾನಗರದಲ್ಲಿ ಜಿಟಿ ಜಿಟಿ ಮಳೆಯ ಅಬ್ಬರ ಮುಂದುವರೆದಿದ್ದು, ತಾಲೂಕಿನಲ್ಲಿ30 ಮನೆಗಳು ಭಾಗಶಃ ನೆಲಕಚ್ಚಿವೆ. ಸೋನೆ ಮಳೆಯನ್ನು ನೆನಪಿಸುವಂತೆ ಸುರಿಯುತ್ತಿರುವ ಮಳೆ ಇಡೀ ನಗರ ಗಡ ಗಡ ನಡುಗುವಂತಹ ಚಳಿಯ ವಾತಾವರಣ ನಿರ್ಮಿಸಿದೆ. ಬೆಳಗ್ಗೆ ಕೊಂಚ ಸೂರ್ಯನ ಕಿರಣಗಳು ಗೋಚರಿಸಿದ್ದವು. ನಂತರ ಜಿಟಿ-ಜಿಟಿ ಮಳೆ ತನ್ನ ಅಬ್ಬರ ಆರಂಭಿಸಿತು.
ಮಂಗಳವಾರದ ಮಳೆಗೆ ಹುಬ್ಬಳ್ಳಿ ಶಹರದಲ್ಲಿ 19, ಹುಬ್ಬಳ್ಳಿ ಗ್ರಾಮೀಣದಲ್ಲಿ 10 ಮನೆ ಸೇರಿ ಒಟ್ಟು 29 ಮನೆಗಳು ಭಾಗಶಃ ಬಿದ್ದು ಹಾನಿಗೊಳಗಾಗಿವೆ. ಗ್ರಾಮೀಣ ಪ್ರದೇಶದ ಅಗಡಿಯಲ್ಲಿ 3, ಬುಡರಸಿಂಗಿ 1, ಚವರಗುಡ್ಡ 1,ಅದರಗುಂಚಿ 2 ಹಾಗೂ ಪಾಳೆ ಗ್ರಾಮದಲ್ಲಿ4 ಮನೆಗಳಿಗೆ ಹಾನಿಯಾಗಿದೆ. ಯಾವುದೇ ಜನ ಜಾನುವಾರು ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಸಚಿವರ ಭೇಟಿ: ಮಳೆಯಿಂದ ಹಾನಿಗೊಳಗಾದ ಬೆಂಗೇರಿ ಸೇರಿದಂತೆ ಕೆಲವು ಪ್ರದೇಶಗಳಿಗೆ ಜಿಲ್ಲಾಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಹಾನಿಗೊಳಗಾದ ಮನೆಗಳ ಕುಟುಂಬ ಸದಸ್ಯರು ತಮ್ಮ ಅಳಲು ತೋಡಿಕೊಂಡರಲ್ಲದೇ, ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದರು. ಸಮಸ್ಯೆ ಆಲಿಸಿದ ಸಚಿವ ಲಾಡ್ ಆದಷ್ಟು ಬೇಗ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.