399 ರೂ ಅಂಚೆ ಇಲಾಖೆಯ ವಿಮೆಗೆ ಪರಿಹಾರವಾಗಿ 10 ಲಕ್ಷ ಪರಿಹಾರದ ಚೆಕ್ ವಿತರಣೆ

graochandan1@gmail.com
2 Min Read

ಗದಗ:  ನಗರದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಅಪಘಾತ ವಿಮಾ ಚೆಕ್ ವಿತರಣಾ ಸಮಾರಂಭ ಜರುಗಿತು. ಭಾರತೀಯ ಅಂಚೆ ಇಲಾಖೆ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವತಿಯಿಂದ ಟಾಟಾ ಎಐಜಿ ( ಅಪಘಾತ ವಿಮೆ) ವಿಮೆಯ ಮೊತ್ತ ಹತ್ತು ಲಕ್ಷ ರೂಪಾಯಿಗಳ ಚೆಕ್ಕನ್ನು ಶಿರಹಟ್ಟಿ ತಾಲೂಕಿನ ತಾರಿಕೊಪ್ಪ ಅಂಚೆ ಸೇವಾನಗರದ  ಲಕ್ಷ್ಮೀ ಲಮಾಣಿ ಇವರಿಗೆ ಹಸ್ತಾಂತರಿಸಲಾಯಿತು.

ರವಿ ಲಮಾಣಿ ಅವರು ತಾರಿಕೊಪ್ಪ ಅಂಚೆ ಕಚೇರಿಯಲ್ಲಿ ಕೇವಲ 399 ರೂಪಾಯಿಯನ್ನು ನೀಡಿ ಒಂದು ಟಾಟಾ ಎಐಜಿ ವಿಮಾ ಪಾಲಿಸಿಯನ್ನು ತೆಗೆದುಕೊಂಡಿದ್ದರು. ನಾಲ್ಕು ತಿಂಗಳ ನಂತರ ದುರದೃಷ್ಟವಶಾತ್ ಅಪಘಾತದಲ್ಲಿ ಮರಣ ಹೊಂದಿದ್ದರು. ಅವರಿಗೆ ಭಾರತೀಯ ಅಂಚೆ ಇಲಾಖೆ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ಟಾಟಾ ಕಂಪನಿಯ ಸಹಯೋಗದೊಂದಿಗೆ 10 ಲಕ್ಷ ರೂಪಾಯಿಗಳ ವಿಮೆಯ ಮೊತ್ತವನ್ನು ರವಿ ಲಮಾಣಿಯವರ ಪತ್ನಿಯಾದ  ಲಕ್ಷ್ಮೀ ಲಮಾಣಿಯವರಿಗೆ ನೀಡಲಾಯಿತು.

ಗದಗ ಅಂಚೆ ವಿಭಾಗದ ಅಧೀಕ್ಷಕರಾದ ಚಿದಾನಂದ ಪದ್ಮಶಾಲಿ ಅವರು ವಿಮೆಯ ಮೊತ್ತದ ಚೆಕ್ಕನ್ನು ಹಸ್ತಾಂತರಿಸಿ ಮಾತನಾಡಿ ಅತೀ ಕಡಿಮೆ ಮೊತ್ತದ ವಿಮಾ ಕಂತನ್ನು ತೆಗೆದುಕೊಂಡು 10 ಲಕ್ಷ ಮೊತ್ತದ ವಿಮಾ ಹಣವನ್ನು ವಾರಸುದಾರರಿಗೆ ನೀಡುತ್ತಿರುವುದು ಅಂಚೆ ಇಲಾಖೆಯ ಸಾರ್ಥಕ ಸೇವೆಯಾಗಿದೆ. ಮೃತರ ಕುಟುಂಬದ ಮುಂದಿನ ನಿರ್ವಹಣೆಗೆ ಸಹಾಯವಾಗಲಿದೆ ಎಂದು ಹೇಳಿದರು. ಈ ಪಾಲಿಸಿಯಿಂದ ಕೇವಲ ಮರಣ ಹೊಂದಿದವರಿಗೆ ಮಾತ್ರವಲ್ಲದೇ ಅಪಘಾತದಿಂದ ಗಾಯಗೊಂಡವರಿಗೂ ಆಸ್ಪತ್ರೆಯ ಖರ್ಚನ್ನು ವಿಮಾ ಪಾಲಿಸಿಯು ನೀಡುತ್ತದೆ ಎಂದರು. ಈ ಪಾಲಿಸಿಯ ಸೌಲಭ್ಯ ಗದಗ ವಿಭಾಗದ ಎಲ್ಲಾ ಅಂಚೆ ಕಛೇರಿಗಳಲ್ಲಿಯೂ ಇದ್ದುಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಮುಖ್ಯ ಅತಿಥಿಗಳಾಗಿ ಉತ್ತರ ಕರ್ನಾಟಕ ವಲಯದ ಇಂಡಿಯಾ ಪೊಸ್ಟ್ ಪೇಮೆಂಟ್ ಬ್ಯಾಂಕ್ ನ ಮುಖ್ಯ ಪ್ರಭಂದಕರಾದ ರಾಣು ಅಗರವಾಲ್ ಅವರು ಮಾತನಾಡಿ ಟಾಟಾ ಅಪಫಾತ ವಿಮೆ ಅತೀ ಕಡಿಮೆ ಕಂತನ್ನು ಹೊಂದಿದ್ದು ಅತೀ ಹೆಚ್ಚಿನ ಮೊತ್ತದ ವಿಮೆಯನ್ನು ನೀಡುತ್ತಿದೆ. ಈ ರೀತಿಯ ಉತ್ತಮ ವಿಮಾ ಸೌಲಭ್ಯ ಬೇರೆ ಯಾವ ವಿಮಾ ಸಂಸ್ಥೆಗಳಲ್ಲಿ ಕೂಡಾ ಇರುವುದಿಲ್ಲ ಎಂದರು.ಅಂಚೆ ಇಲಾಖೆಯಿಂದ ಈ ವಿಮಾ ಪಾಲಿಸಿಗಳ ಸೌಲಭ್ಯ ಸಿಗುವುದು ಎಲ್ಲಾ ಗ್ರಾಮೀಣ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.

- Advertisement -
Ad image

ಗದಗ ಐಪಿಬಿಬಿಯ ಮೇನೇಜರ್ ಆನಂದಸಾಗರ ಅವರು ಮಾತನಾಡಿ ಗದಗ ಶಾಖೆಯಲ್ಲಿ ಮೊದಲ ಅಪಘಾತ ವಿಮೆಯನ್ನು ನೀಡುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರು ಈ ಸೌಲಭ್ಯ ಪಡೆದುಕೊಳ್ಳಬೇಕೆಂದು ತಿಳಿಸಿದರು. ವಿಮಾ ಪಾಲಿಸಿಯನ್ನು ಮಾಡಿಸಿ ಬಡ ಕುಟುಂಬಕ್ಕೆ ಸಹಾಯವನ್ನು ಮಾಡಲು ಕಾರಣರಾದ ತಾರೀಕೊಪ್ಪ ಶಾಖಾ ಅಂಚೆ ಪಾಲಕ ಬಸವರಾಜ ಮಡಿವಾಳರ್ ಅವರನ್ನು ಇಲಾಖೆಯ ಉನ್ನತ ಅಧಿಕಾರಿಗಳು ಪ್ರಶಂಸಿದರು.

ಸಹಾಯಕ ಅಧೀಕ್ಷಕ ಮಂಜುನಾಥ, ಟಾಟಾ ಸಂಸ್ಥೆಯ ವಿಶ್ವಾಸ್, ಉಮೇಶ್, ವಿಭಾಗೀಯ ಕಛೇರಿಯ ಸಿಬ್ಬಂದಿಗಳು ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಸವರಾಜ ಶೇಡದ್ ಕಾರ್ಯಕ್ರಮ ನಿರೂಪಿಸಿದರು.

Share this Article