ಮುಂಡರಗಿ: ಮಲೆನಾಡಿನ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತುಂಗಭದ್ರಾ ನದಿ ಒಳಹರಿವು ಹೆಚ್ಚಳವಾಗಿದೆ.
ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದ ಪರಿಣಾಮ ಶುಕ್ರವಾರ ತಾಲೂಕಿನ ಹಮ್ಮಿಗಿ ಬಳಿಯ ಸಿಂಗಟಾಲೂರು ಬ್ಯಾರೇಜ್ನ 26 ಗೇಟ್ಗಳ ಪೈಕಿ 8 ಗೇಟ್ಗಳ ಮೂಲಕ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.
ಸಿಂಗಟಾಲೂರು ಬ್ಯಾರೇಜ್ನಿಂದ ಜು. 21ರಂದು 23,166 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಬಿಡಲಾಗಿದೆ.
ಬ್ಯಾರೇಜ್ 3.12 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಬ್ಯಾರೇಜ್ ಹಿನ್ನೀರಿನಿಂದ ಗುಮ್ಮಗೋಳ, ಬಿದರಹಳ್ಳಿ, ವಿಠ್ಠಲಾಪುರ ಮತ್ತು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಅಲ್ಲಿಪುರ ಗ್ರಾಮಗಳು ಮುಳುಗಡೆ ಪ್ರದೇಶಕ್ಕೆ ಒಳಪಟ್ಟಿವೆ.
ನಾಲ್ಕು ಗ್ರಾಮಗಳನ್ನು ಸಂಪೂರ್ಣವಾಗಿ ಇನ್ನೂ ಸ್ಥಳಾಂತರಿಸದ ಕಾರಣ ಬ್ಯಾರೇಜ್ನಲ್ಲಿ ಸದ್ಯ 1.98 ಟಿಎಂಸಿ ನೀರು ಮಾತ್ರ ಸಂಗ್ರಹಿಸಲಾಗುತ್ತಿದೆ. ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತಿದ್ದು, ಜು. 21ರಂದು ಬ್ಯಾರೇಜ್ಗೆ 23,166 ಕ್ಯೂಸೆಕ್ ಒಳಹರಿವು ಇದ್ದು, ಸಂಪೂರ್ಣವಾಗಿ ಒಳಹರಿವಿನ ನೀರನ್ನು ನದಿಗೆ ಹರಿಬಿಡಲಾಗಿದೆ.

