ಬೆಂಗಳೂರು: ವಿಧಾನಸಭೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿಸಿದ ಕಾರಣಕ್ಕಾಗಿ ಬಿಜೆಪಿಯ 10 ಮಂದಿ ಶಾಸಕರನ್ನು ವಿಧಾನಸಭೆ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಲಾಗಿದೆ.
ಬಿಜೆಪಿ ಸದಸ್ಯರಾದ ಡಾ. ಸಿಎನ್ ಅಶ್ವತ್ಥ ನಾರಾಯಣ, ಸುನೀಲ್ ಕುಮಾರ್, ಆರ್ ಅಶೋಕ್, ವೇದವಾಸ ಕಾಮತ್, ಯಶ್ ಪಾಲ್ ಸುವರ್ಣ, ಭರತ್ ಶೆಟ್ಟಿ, ಉಮನಾಥ್ ಕೋಟ್ಯಾನ್, ಅರವಿಂದ ಬೆಲ್ಲದ, ಧೀರಜ್ ಮುನಿ ರಾಜ್, ಆರಗ ಜ್ಞಾನೇಂದ್ರ ಅವರನ್ನು ಅಮಾನತು ಮಾಡಲಾಗಿದೆ.
ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ಹಾಗೂ ನಡಾವಳಿ ನಿಯಮ 348 ಮೇರೆಗೆ ಅಮಾನತು ಮಾಡಲಾಗಿದೆ. ಈ ಪ್ರಸ್ತಾವಕ್ಕೆ ಸ್ಪೀಕರ್ ಖಾದರ್ ಅಂಗೀಕಾರ ನೀಡಿದರು ಹಾಗೂ ಸದಸ್ಯರನ್ನು ಸದನದಿಂದ ಹೊರಗೆ ಹೋಗುವಂತೆ ಸೂಚಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ನಡೆದ ವಿಪಕ್ಷ ಒಕ್ಕೂಟದ ಸಭೆಗೆ ಆಗಮಿಸಿದ್ದ ನಾಯಕರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದನ್ನು ವಿರೋಧಿಸಿದ ಸದನದಲ್ಲಿ ಧರಣಿ ನಡೆಸಿತ್ತು. ಧರಣಿ ನಡುವೆಯೇ ಮಸೂದೆಗಳನ್ನು ಪಾಸ್ ಮಾಡಲಾಗಿದೆ. ಈ ವೇಳೆ ಭೋಜನ ವಿರಾಮಕ್ಕೆ ಅವಕಾಶ ನೀಡದೆ ಸದನ ಮುಂದುವರಿದ ಹಿನ್ನಲೆಯಲ್ಲಿ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಪೀಠದಲ್ಲಿ ಇದ್ದ ಉಪ ಸ್ಪೀಕರ್ ಮೇಲೆ ಬಿಲ್ ಪುತ್ರಿಯನ್ನು ಹರಿದು ಎಸೆದಿದ್ದರು. ಈ ನಿಟ್ಟಿನಲ್ಲಿ ಪೀಠಕ್ಕೆ ಅಗೌರವ ತೋರಿಸಿದ ಕಾರಣಕ್ಕಾಗಿ ಒಂಬತ್ತು ಸದಸ್ಯನ್ನು ಅಮಾನತು ಮಾಡಲಾಗಿದೆ.