ಶೇ. 76ರಷ್ಟು ₹2000 ನೋಟುಗಳು ಬ್ಯಾಂಕುಗಳಿಗೆ ವಾಪಸ್‌: ಆರ್‌ಬಿಐ

ಸಮಗ್ರ ಪ್ರಭ ಸುದ್ದಿ
1 Min Read

ಮುಂಬೈ : ದೇಶದಲ್ಲಿ ಚಲಾವಣೆಯಲ್ಲಿದ್ದ 2,000 ರೂಪಾಯಿ ಮುಖಬೆಲೆಯ ನೋಟುಗಳ ಪೈಕಿ ಶೇ. 76ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ವಾಪಸಾಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ತಿಳಿಸಿದೆ. ಬಹುತೇಕ 2,000 ರೂ. ನೋಟುಗಳು ಠೇವಣಿಗಳ ಮೂಲಕವೇ ಬ್ಯಾಂಕ್‌ಗಳಿಗೆ ಮರಳಿವೆ ಎಂದು ಕೇಂದ್ರೀಯ ಬ್ಯಾಂಕ್‌ ಹೇಳಿದೆ.

ಮೇ 19 ರಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಚಲಾವಣೆಯಲ್ಲಿರುವ 2,000 ರೂಪಾಯಿ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿತ್ತು. ಮತ್ತು ಕರೆನ್ಸಿ ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ದೇಶದ ನಾಗರಿಕರಿಗೆ ಸೆಪ್ಟೆಂಬರ್ 30 ರವರೆಗೆ ಸಮಯವನ್ನು ನೀಡಿತ್ತು.

ಮಾಹಿತಿಯ ಪ್ರಕಾರ, ಮೇ 19 ರಂದು 2,000 ರೂ. ಮುಖಬೆಲೆಯ ನೋಟುಗಳನ್ನು ವಾಪಸ್‌ ಪಡೆಯುವುದಾಗಿ ಘೋಷಿಸಿದ ಬಳಿಕ ಚಲಾವಣೆಯಿಂದ ಮರಳಿ ಬಂದಿರುವ 2,000 ರೂ. ಬ್ಯಾಂಕ್ ನೋಟುಗಳ ಒಟ್ಟು ಮೌಲ್ಯವು ಜೂನ್ 30, 2023ರವರೆಗೆ 2.72 ಲಕ್ಷ ಕೋಟಿ ರೂ.ಗಳಾಗಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೇಳಿದೆ.

ಇದರಿಂದ ಈಗ ಮೇ 19, 2023ರ ಲೆಕ್ಕದ ಪ್ರಕಾರ ಚಲಾವಣೆಯಲ್ಲಿದ್ದ 2,000 ರೂ. ಬ್ಯಾಂಕ್ ನೋಟುಗಳಲ್ಲಿ ಶೇ. 76ರಷ್ಟು ಬ್ಯಾಂಕ್‌ಗಳಿಗೆ ವಾಪಸ್‌ ಬಂದಂತೆ ಆಗಿದೆ ಎಂದು ಕೇಂದ್ರೀಯ ಬ್ಯಾಂಕ್‌ ವಿವರ ನೀಡಿದೆ.

ಪ್ರಮುಖ ಬ್ಯಾಂಕ್‌ಗಳಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಚಲಾವಣೆಯಿಂದ ಮರಳಿ ಪಡೆದ 2000 ರೂ. ಮುಖಬೆಲೆಯ ಒಟ್ಟು ಬ್ಯಾಂಕ್ ನೋಟುಗಳಲ್ಲಿ ಸುಮಾರು ಶೇ. 87ರಷ್ಟು ಠೇವಣಿ ರೂಪದಲ್ಲಿವೆ ಎಂದು ರಿಸರ್ವ್‌ ಬ್ಯಾಂಕ್‌ ಹೇಳಿದೆ. ಮತ್ತು ಉಳಿದ ಸುಮಾರು ಶೇ. 13ರಷ್ಟು 2000 ರೂ. ಮುಖಬೆಲೆಯ ನೋಟುಗಳನ್ನು ಇತರ ಮುಖಬೆಲೆಯ ಬ್ಯಾಂಕ್ ನೋಟುಗಳಾಗಿ ವಿನಿಮಯ ಮಾಡಲಾಗಿದೆ ಎಂದು ಕೇಂದ್ರೀಯ ಬ್ಯಾಂಕ್‌ ವಿವರ ನೀಡಿದೆ.

ಸಾರ್ವಜನಿಕರಿಗೆ ತಮ್ಮ ಬಳಿಯಲ್ಲಿರುವ 2,000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗಳಿಗೆ ಠೇವಣಿ ಮಾಡಲು ಅಥವಾ ಬೇರೆ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಇದೇ ಸೆಪ್ಟೆಂಬರ್‌ 30ರವರೆಗೆ ಸಮಯ ಇದೆ.

Share this Article