ಜುಲೈ ೧೫ ಹೆಸರು ಬೆಳೆಗೆ ವಿಮಾ ಕಂತು ಪಾತಿಗೆ ಕೊನೆಯ ದಿನ

ಸಮಗ್ರ ಪ್ರಭ ಸುದ್ದಿ
2 Min Read

ಗದಗ :  ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಅಧಿಸೂಚನೆ ಹೊರಡಿಸಿರುತ್ತದೆ. ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಹೆಸರು ಬೆಳೆಗೆ ವಿಮಾ ಕಂತು ತುಂಬಲು ಜುಲೈ ೧೫ ಕೊನೆಯ ದಿನವಾಗಿದೆ. ಭತ್ತ, ಜೋಳ, ಮುಸುಕಿನಜೋಳ, ಸಜ್ಜೆ, ನವಣೆ, ತೊಗರಿ, ಹುರುಳಿ, ಶೇಂಗಾ, ಎಳ್ಳು, ಹತ್ತಿ ಹಾಗೂ ಸಜ್ಜೆ ಬೆಳೆಗಳಿಗೆ ವಿಮಾ ಕಂತು ತುಂಬಲು ಜುಲೈ ೩೧ ಹಾಗೂ ಸೂರ್ಯಕಾಂತಿ (ನೀರಾವರಿ& ಮಳೆ ಆಶ್ರಿತ), ಈರುಳ್ಳಿ ಮತ್ತು ಮೆಣಸಿನಕಾಯಿ (ಮಳೆ ಆಶ್ರಿತ) ಬೆಳೆಗಳಿಗೆ ಅಗಸ್ಟ ೧೬ ಕೊನೆಯ ದಿನವಾಗಿದೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಇಂತಹ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಬೆಳೆ ವಿಮೆ ಘಟಕದಲ್ಲಿ ಶೇ.೭೫ ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ. ೨೫ ರಷ್ಟು ಪರಿಹಾರವನ್ನು ವಿತರಿಸಲು ಯೋಜನೆಯಲ್ಲಿ ಅವಕಾಶ ಇರುತ್ತದೆ. ಈ ರೀತಿಯ ( Prevented Sowing ) ಪರಿಹಾರವು ಗ್ರಾಮ ಪಂಚಾಯತ ಮಟ್ಟದ ಅಧಿಸೂಚಿತ ಬೆಳೆಗಳಿಗೆ ನೋಂದಣಿ ಮಾಡಿಸಿದ ರೈತರಿಗೆ ಮಾತ್ರ ಅನ್ವಯಿಸುತ್ತದೆ. ಈಗಾಗಲೇ ಬಿತ್ತನೆ ಮಾಡಿರುವ ರೈತರು ಬೆಳೆ ವಿಮೆ ನೋಂದಣಿ ಮಾಡಿಸದೆ ಇದ್ದಲ್ಲಿ ತಮ್ಮ ಗ್ರಾಮ ಪಂಚಾಯತ ಮಟ್ಟದ ಅಧಿಸೂಚಿತ ಬೆಳೆಗಳಿಗೆ ಕೊನೆಯ ದಿನಾಂಕದೊಳಗಾಗಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡು ಯೋಜನೆಯ ಸದುಪಯೋಗ ಪಡೆಯಲು ಕೋರಲಾಗಿದೆ.
ನೋಂದಣಿಗಾಗಿ ರೈತರು FRUITSID (FID) ಹೊಂದಿರುವುದು ಕಡ್ಡಾಯವಾಗಿರುತ್ತದೆ. ಬೇರೊಬ್ಬರ ಹೆಸರಿನಲ್ಲಿರುವ ಜಮೀನಿಗೆ ನೋಂದಣಿಯನ್ನು ತಪ್ಪಿಸಲು ಈ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಬೆಳೆ ವಿಮೆ ತುಂಬಲು ಕೋರಲಾಗಿದೆ.

ಗದಗ ಜಿಲ್ಲೆಗೆ ಸಂಬಂಧಿಸಿದಂತೆ ಬಜಾಜ ಅಲಿಯಾಂಝ ಜನರಲ್ ಇನ್ಯೂರನ್ಸ್ ಕಂಪನಿ ಲಿಮಿಟೆಡ್‌ಇವರು ಈ ಮುಂಗಾರು ಹಂಗಾಮಿನ ಬೆಳೆ ವಿಮೆಯ ಅನುಷ್ಠಾನ ಸಂಸ್ಥೆಯಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ವಿಮೆ ಸಂಸ್ಥೆ, ಬ್ಯಾಂಕ್, ಸಾರ್ವಜನಿಕ ಸೇವಾಕೇಂದ್ರ (CSC), ಗ್ರಾಮ ಒನ್ ಕೇಂದ್ರ, ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಲು ಜಿಲ್ಲಾಧಿಕಾರಿ ವೈಶಾಲಿ ಎಮ್.ಎಲ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this Article