ಬೆಳೆ ವಿಮೆ ಕುರಿತು ರೈತರಲಿ ಜಾಗೃತಿ ಮೂಡಿಸುವ ಕಾರ್ಯವಾಗಲಿ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ

ಸಮಗ್ರ ಪ್ರಭ ಸುದ್ದಿ
5 Min Read

ಗದಗ : ಜಿಲ್ಲೆಯ ಪ್ರತಿಯೊಬ್ಬ ಅರ್ಹ ರೈತರಿಗೆ  ಬೆಳೆ ವಿಮೆ ಸೌಲಭ್ಯವನ್ನು ದೊರಕಿಸುವ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲಿಯೇ ತಯಾರಿ ನಡೆಸುವದರ ಜೊತೆಗೆ ಬೆಳೆವಿಮೆ ಕುರಿತು ರೈತರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಚಾರ ಕೈಗೊಳ್ಳಲು ಮುಂದಾಗುವಂತೆ ರಾಜ್ಯ ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ತಿಳಿಸಿದರು.

ಗದಗ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶನಿವಾರದಂದು ಜರುಗಿದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳೆ ವಿಮೆ ಕುರಿತು ರೈತರಿಗೆ ಮನವರಿಕೆ ಮಾಡಿ ಕೊಡಲು ಕಂದಾಯ ಹಾಗೂ ವಿಮಾ ಕಂಪನಿಯವರನ್ನು ನೇಮಿಸುವದರ ಜೊತೆಗೆ ಬೆಳೆ ವಿಮೆ ಕುರಿತು ನಿಯಮಿತವಾಗಿ ಪತ್ರಿಕಾ ಪ್ರಕಟಣೆಗಳನ್ನು ನೀಡಬೇಕು. ಬೆಳೆ ವಿಮೆ ವ್ಯಾಪ್ತಿಗೆ ಬರುವಂತಹ ಹೆಸರು ಬೆಳೆ ಜೊತೆಗೆ ಎಲ್ಲ ಬೆಳೆಗಳ ಕುರಿತು ಜಾಗೃತಿ ಮೂಡಿಸಲು ಸೂಚಿಸಿದರು.

ಈಗಾಗಲೇ ಜಿಲ್ಲೆಯ ೫೦ ಸಾವಿರ ಹೆಕ್ಟೆರ ಪ್ರದೇಶದಲ್ಲಿ ಬಿತ್ತನೆಯಾದಂತಹ ಹೆಸರು ಬೆಳೆ ಮಳೆ ಆಗದೇ ಇರುವ ಕಾರಣ ಹಾನಿ ಆಗುವ ಸಂಭವ ಹೆಚ್ಚಾಗಿದೆ. ಈ ವಿಷಯದಲ್ಲಿ ಯಾವುದೇ ಪ್ರಮಾದಗಳನ್ನು ಎಸಗದೆ ರೈತರಿಗೆ ಅನ್ಯಾಯವಾಗದಂತೆ ಬೆಳೆ ವಿಮೆ ಪಾವತಿಸಬೇಕು. ಬೆಳೆ ವಿಮೆ ಕುರಿತು ಇರುವ ಮಾರ್ಗಸೂಚಿಗಳ ಕುರಿತು ವಿಸ್ತ್ರತವಾಗಿ ಚರ್ಚಿಸಬೇಕು. ಜಿಲ್ಲೆಯಲ್ಲಿ ಹೆಸರು ಬಿತ್ತನೆಯಾದಂತಹ ಪ್ರದೇಶಗಳನ್ನು ಗುರುತಿಸಿ ಅಂತಹವರ ಪಹಣಿ ಪತ್ರದಲ್ಲಿ ನಮೂದಿಸಲು ತಹಶೀಲ್ದಾರರು ಹಾಗೂ ಸಹಾಯಕ ಕೃಷಿ ನಿರ್ದೇಶಕರುಗಳು ಕೂಡಲೇ ಕಾರ್ಯ ಪ್ರವೃತ್ತರಾಗಿ ಜು.೮ ರೊಳಗಾಗಿ ಈ ಕಾರ್ಯವನ್ನು ಪೂರ್ಣಗೊಳಿಸಲು ಸೂಚನೆ ನೀಡಿದರು. ಅಲ್ಲದೇ ಹೆಸರು ಬಿತ್ತನೆ ಮಾಡಿದ ರೈತರೆಲ್ಲರೂ ಕಡ್ಡಾಯವಾಗ ಬೆಳೆ ವಿಮೆ ಮಾಡಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.

ರೋಣ ಶಾಸಕರಾದ ಜಿ.ಎಸ್.ಪಾಟೀಲ ಅವರು ಕಳಪೆ ಸೂರ್ಯಕಾಂತಿ ಬೀಜ ಬಳಸಿದರ ಕುರಿತು ಪತ್ರಿಕೆಯಲ್ಲಿ ಪ್ರಕಟವಾದ ವಿಷಯವನ್ನು ಸಭೆಯ ಗಮನಕ್ಕೆ ತಂದರು. ಈ ಕುರಿತು ಜಂಟಿ ಕೃಷಿ ನಿರ್ದೇಶಕರಿಂದ ಮಾಹಿತಿ ಪಡೆದ ಸಚಿವ ಎಚ್.ಕೆ.ಪಾಟೀಲ ಅವರು ಕಳಪೆ ಗುಣಮಟ್ಟದ ಸೂರ್ಯಕಾಂತಿ ಬಿತ್ತನೆ ಬೀಜ ಪೂರೈಕೆಯಾಗಿದ್ದರ ಕುರಿತು ವರದಿ ಬಂದಲ್ಲಿ ಅಂತಹ ಕಂಪನಿ ವಿರುದ್ಧ ಯಾವುದೇ ಒತ್ತಡಗಳಿಗೆ ಮನಿಯದೇ ನಿರ್ದಾಕ್ಷಣ್ಯವಾಗಿ ಕ್ರಿಮಿನಲ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು ಹಾಗೂ ಕಳಪೆ ಬೀಜದಿಂದ ಬಾಧಿತರಾದ ರೈತರಿಗೆ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕೆಂದು ತಿಳಿಸಿದರು.

ಜಿಲ್ಲೆಯಲ್ಲಿ ಬರಗಾಲದ ಛಾಯೆ ಎದ್ದು ಕಾಣುತ್ತಿದ್ದು ಇದರ ಸಮರ್ಪಕ ನಿರ್ವಹಣೆಗೆ ಪೂರ್ವಭಾವಿ ತಯಾರಾಗಿರಬೇಕು. ನರೆಗಾ ಯೋಜನೆಯಡಿ ಈಗಿರುವ ಗುರಿಯನ್ನು ನಾಲ್ಕು ಪಟ್ಟು ಹೆಚ್ಚಿಗೆ ಮಾಡಬೇಕು. ಅಲ್ಲದೇ ನೂರು ಮಾನವ ದಿನಗಳ ಬದಲಾಗಿ ಎರಡನೂರು ಮಾನವ ದಿನಗಳನ್ನು ಒದಗಿಸಲು ಸಭೆಯಲ್ಲಿ ಠರಾವು ಮಾಡಿ ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.

ಡಿ.ಬಿ.ಓ.ಟಿ ಯೋಜನೆಯಡಿ ಪ್ರತಿಯೊಬ್ಬರಿಗೆ ಎಪ್ಪತ್ತು ಲೀಟರ್ ನೀರು ಒದಗಿಸುವ ಯೋಜನೆಯಾಗಿದ್ದು ಇದರಲ್ಲಿ ಪ್ರಸ್ತುತ ಕೇವಲ ನಲವತ್ತು ಲೀಟರ್ ನೀರು ಮಾತ್ರ ಪೂರೈಸಲಾಗುತ್ತಿದೆ. ಪ್ರಸ್ತುತ ಈ ಯೋಜನೆಗಳನ್ನು ನಿರ್ವಹಿಸುತ್ತಿರುವ ಏಜೆನ್ಸಿಗಳಿಗೆ ಅಗತ್ಯದ ಜನರೇಟರಗಳನ್ನು ಪೂರೈಸಲಾಗಿದ್ದರು ಸಹ ಸಬೂಬುಗಳನ್ನು ಹೇಳುವ ಮೂಲಕ ಸಮರ್ಪಕವಾಗಿ ನೀರು ಪೂರೈಕೆ ಆಗದಿರುವ ಕುರಿತು ಪರಿಶೀಲಿಸಲು ಅಧಿಕಾರಿಗಳಿಗೆ ತಿಳಿಸಿದರು. ಮುಂದೆ ಜರುಗಲಿರುವ ಪ್ರತಿ ಸಭೆಗೂ ಕುಡಿಯುವ ನೀರಿಗೆ ಸಂಬಂಧಿಸಿದ ಏಜೆನ್ಸಿಯ ಜವಾಬ್ದಾರಿಯುತ ವ್ಯಕ್ತಿಯನ್ನು ಕಡ್ಡಾಯವಾಗಿ ಆಗಮಿಸಬೇಕೆಂದು ಸೂಚಿಸಿದರು.

ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ ಅವರು ಅವಳಿ ನಗರದಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಕುರಿತು ನಗರಸಭೆ ಪೌರಾಯುಕ್ತರ ಮಾಹಿತಿಗೆ ಆಕ್ಷೇಪ ವ್ಯಕ್ತಪಡಿಸಿ ತಾವು ನೀಡುತ್ತಿರುವ ಮಾಹಿತಿ ಶುದ್ಧ ಸುಳ್ಳಾಗಿದೆ ನಾವಿರುವ ಪ್ರದೇಶದಲ್ಲಿಯೇ ಇಪ್ಪತ್ತು ದಿನಕ್ಕೊಂದು ಸಾರಿ ನೀರು ಬರುತ್ತಿದ್ದು ಕೆಲವೊಂದು ವಾರ್ಡಗಳಲ್ಲಿ ಮೂವತ್ತು ದಿನಕ್ಕೊಮ್ಮೆ ನೀರು ಪೂರೈಸಿದ ಉದಾಹರಣೆಗಳುಂಟು ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ.ಪಾಟೀಲ ಅವರು ಅವಳಿ ನಗರದಲ್ಲಿ ನೀರಿನ ಕೊರತೆ ಇರುವಂತಹ ವಾರ್ಡುಗಳಲ್ಲಿ ನೀರಿನ ಟ್ಯಾಂಕರಗಳ ಮೂಲಕ ನೀರು ಪೂರೈಸಬೇಕು. ಈ ಕುರಿತು ನಗರ ಸಭೆಯಲ್ಲಿ ಸಹಾಯವಾಣಿ ತೆರೆದು ನೀರು ಪೂರೈಕೆ ಕುರಿತು ದೂರು ಬಂದಲ್ಲಿ ಅರ್ಧ ಗಂಟೆಯಲ್ಲಿ ಅಂತಹ ಪ್ರದೇಶಗಳಿಗೆ ನೀರಿನ ಟ್ಯಾಂಕರ ತಲುಪಿಸಲು ನಾಳೆಯಿಂದಲೇ ಪ್ರಾರಂಭಿಸಲು ಪೌರಾಯುಕ್ತರಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಕೊಳವೆ ಬಾವಿಗಳ ಮೇಲೆ ಅವಲಂಭಿತವಾಗಿರುವ ಗ್ರಾಮಗಳ ವಿವರವಾದ ವರದಿ ಸಲ್ಲಿಸಿ ನೀರು ಪೂರೈಕೆಯಲ್ಲಿ ವ್ಯತ್ಯವಯವಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದರು.

ಜುಲೈ ಅಂತ್ಯದವರೆಗೆ ಜಿಲ್ಲೆಯಲ್ಲಿನ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿರುವ ಕುರಿತು ಎಲ್ಲ ಗ್ರಾಮ ಪಂಚಾಯತಗಳಿಂದ ವರದಿ ಪಡೆದು ದುರಸ್ತಿಗೊಳಪಟ್ಟಂತಹ ಎಲ್ಲ ಘಟಕಗಳನ್ನು ಪುನರ ಪ್ರಾರಂಭವಾಗುವಂತೆ ಸೂಚನೆ ನೀಡಿದರು. ಡಿ.ಬಿ.ಓ.ಟಿ ಯೋಜನೆಯಡಿ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಕೆ ಆಗದೇ ಇರುವಂತಹ ಗ್ರಾಮಗಳನ್ನು ಗುರುತಿಸಿ ಅಂತಹ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸುವ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಮುಂದಿನ ದಿನಮಾನಗಳಲ್ಲಿ ಜಾನುವಾರುಗಳಿಗೆ ಮೇವಿನ ತೊಂದರೆ ಆಗದಂತೆ ಈಗಿನಿಂದಲೇ ಮೇವಿನ ಬ್ಯಾಂಕ ತೆರೆಯಬೇಕು. ಜಿಲ್ಲೆಗೆ ಬೇಕಾಗಬಹುದಾಂತಹ ಮೇವಿನ ಅಗತ್ಯತೆಗಳನ್ನು ದಾಸ್ತಾನು ಮಾಡಿಕೊಳ್ಳಲು ಈಗಿನಿಂದಲೇ ಕಾರ್ಯಪ್ರವೃತ್ತರಾಗುವಂತೆ ತಿಳಿಸಿದರು. ಸ್ವಾತಂತ್ರೋತ್ಸವದ ಎಪ್ಪತ್ತೈದು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ನಾಲ್ಕು ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ರೂಪಿಸಲು ಸಭೆಯಲ್ಲಿ ನಿರ್ಣಯಿಸಿದರು. ಅಲ್ಲದೇ ಈ ಗುರಿಯನ್ನು ಪೂರ್ಣಗೊಳಿಸಲು ಎಲ್ಲ ಇಲಾಖೆಗಳು ಪಾಲ್ಗೊಂಡು ಗದಗ ಜಿಲ್ಲೆಯನ್ನು ಹಸಿರು ಜಿಲ್ಲೆಯನ್ನಾಗಿಸಲು ಪಣತೊಡಲು ಕರೇ ನೀಡಿದರು.

ಸರಕಾರ ಘೋಷಿಸಿರುವ ಗ್ಯಾರಂಟಿಗಳನ್ನು ಅಪೇಕ್ಷಿತ ದಿನದೊಳಗಾಗಿ ಅನುಷ್ಠಾನಗೊಳಿಸಲು ಜಿಲ್ಲೆ ಪ್ರಥಮವಾಗಿರಬೇಕು. ಅಲ್ಲದೇ ಈ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ನಿಗಾ ವಹಿಸಬೇಕು ಎಂದು ಸಚಿವರಾದ ಎಚ್.ಕೆ.ಪಾಟೀಲ ಸೂಚಿಸಿದರು.

ನರಗುಂದ ಶಾಸಕರಾದ ಸಿ.ಸಿ. ಪಾಟೀಲ ಮಾತನಾಡಿ ಈಗಾಗಲೇ ಬಿತ್ತನೆ ಮಾಡಿದಂತಹ ಹೆಸರು ಬೆಳೆ ನಾಶವಾದಲ್ಲಿ ಬೆಳೆ ವಿಮೆ ದೊರಕಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಸಭೆ ಜರುಗಿಸಲು ತಿಳಿಸಿದರು. ಪ್ರತಿ ಗ್ರಾಮ ಪಂಚಾಯತಗಳಿಗೆ ಒಂದರಂತೆ ಬೆಳೆ ವಿಮೆ ಕುರಿತು ಬ್ಯಾನರ ಅಳವಡಿಸಬೇಕು. ನಿಗದಿತ ಪ್ರಮಾಣದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯವಯವಾಗುತ್ತಿರುವ ಕುರಿತು ಗಂಭೀರವಾಗಿ ಪರಿಗಣಿಸಲು ತಿಳಿಸಿದರು. ಮೇವು ಬೆಳೆಯಲು ರೈತರಿಗೆ ಉತ್ತೇಜನ ನೀಡಬೇಕೆಂದರು.

ರೋಣ ಶಾಸಕರಾದ ಜಿ.ಎಸ್.ಪಾಟೀಲ ಮಾತನಾಡಿ ಜಿಲ್ಲೆಯ ಕೆಲ ಭಾಗದಲ್ಲಿ ಕಳಪೆ ಸೂರ್ಯಕಾಂತಿ ಬೀಜ ಬಿತ್ತನೆಯಿಂದ ನಷ್ಟ ಅನುಭವಿಸಿದ್ದು ಈ ಕುರಿತು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಪಡೆದರು. ಮಳೆ ಅಭಾವದಿಂದ ಇಂದು ಸಾಕಷ್ಟು ಗ್ರಾಮಗಳಿಗೆ ನೀರಿನ ಅಭಾವವಿದ್ದು ಅಗತ್ಯಬಿದ್ದಲ್ಲಿ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆದು ನೀರು ಪೂರೈಸಲು ಕ್ರಮ ಕೈಗೊಳ್ಳಬೇಕೆಂದರು.

ವಿಧಾನ ಪರಿಷತ ಸದಸ್ಯರಾದ ಎಸ.ವಿ.ಸಂಕನೂರ ಮಾತನಾಡಿ ಅವಳಿನಗರಕ್ಕೆ ನೀರು ಸರಬರಾಜಿಗೆ ಅಳವಡಿಸಿದಂತಹ ಪೈಪಲೈನ್ ಬದಲಾಯಿಸಲು ಬೇಕಾದಂತಹ ಅನುದಾನ ಬಿಡುಗಡೆ ಮಾಡಲು ಸಭೆಯ ಮೂಲಕ ಸಚಿವರಲ್ಲಿ ಮನವಿ ಮಾಡಿದರು. ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಯಾವ ವಿಷಯಗಳಲ್ಲಿ ವಿಧ್ಯಾರ್ಥಿಗಳು ಅನುತ್ತೀರ್ಣರಾಗಿರುತ್ತಾರೆ ಎಂಬ ಮಾಹಿತಿ ಸಂಗ್ರಹಿಸಲು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಅಪರ ಜಿಲ್ಲಾಧಿಕಾರಿ ಮಾರುತಿ.ಎಂ.ಪಿ., ಉಪವಿಭಾಗಾಧಿಕಾರಿ ಅನ್ನಪೂರ್ಣ, ತಹಶೀಲ್ದಾರರು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Share this Article