ಮಹಾತ್ಮಾ ಗಾಂಧೀ ಸಬರಮತಿ ಆಶ್ರಮದ ಆವರಣದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ 

ಸಮಗ್ರ ಪ್ರಭ ಸುದ್ದಿ
2 Min Read

ಗದಗ : ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ವಿಶ್ವವಿದ್ಯಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ ಸಹಯೋಗದಲ್ಲಿ ಶನಿವಾರದಂದು ವಿಶ್ವವಿದ್ಯಾಲಯದ ಗಾಂಧೀಜಿ ಸಬರಮತಿ ಆಶ್ರಮದ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಜರುಗಿತು.

ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಸಬರಮತಿ ಆಶ್ರಮದಲ್ಲಿರುವ ಮಹಾತ್ಮಾ ಗಾಂಧೀಜಿ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಿ ನಂತರ ಆವರಣದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಆರ್.ಎಫ್.ಓ ನಮನ ನಾಯಕ ಅವರು ನನ್ನ ಗಿಡ, ನನ್ನ ಹೆಮ್ಮೆ ವೃಕ್ಷಾಂದೋಲನದಲ್ಲಿ ನಾನು ಭಾಗಿಯಾಗುತ್ತಿರುವುದಕ್ಕೆ ಸಂತೋಷಪಡುತ್ತೇನೆ. ನಾನು ಇಂದು ನೆಟ್ಟ ಈ ಸಸಿ ಬೆಳೆದು ದೊಡ್ಡದಾಗಿ ಮರವಾಗುವುದನ್ನು ನೋಡಲು ಇಚ್ಛಿಸುತ್ತೇನೆ. ಈ ಸಸಿಯನ್ನು ನಾನೇ ಪೋಷಿಸುತ್ತೇನೆ. ನೀರು ಹಾಕುತ್ತೇನೆ. ದನಕರುಗಳ ಪಾಲಾಗದಂತೆ ಸಂರಕ್ಷಿಸುತ್ತೇನೆ. ಊರನ್ನು ಹಸಿರುಮಯ ಮಾಡಲು ಕೈ ಜೋಡಿಸುತ್ತೇನೆ ಎನ್ನುವ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಅರಣ್ಯ ಇಲಾಖೆಯಿಂದ ಜುಲೈ 1 ರಿಂದ 7 ರವರೆಗೆ ಸಸಿ ನೆಡುವ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ನನ್ನ ಗಿಡ ನನ್ನಹೆಮ್ಮೆ, ಹನಿ ಹನಿ ಕೂಡಿದರೆ ಹಳ್ಳ, ಯಾವುದೇ ಕಾರ್ಯ ಚಿಕ್ಕದಲ್ಲ, ಮನಸ್ಸಿದ್ದರೆ ಮಾರ್ಗ, ಬನ್ನಿ ಕೈಜೋಡಿಸಿ ಕರುನಾಡನ್ನು ಸಸ್ಯಕಾಶಿ ಮಾಡೋಣ ಎಂಬ ಧ್ಯೇಯೋದ್ದೇಶದೊಂದಿಗೆ ಸಸಿ ನೆಡುವ ಸಪ್ತಾಹವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಗದಗ ನಗರದ ಸಬರಮತಿ ಆಶ್ರಮದಲ್ಲಿ ವನಮಹೋತ್ಸವವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ನರಗುಂದ ವಿಧಾನಸಭಾಕ್ಷೇತ್ರದ ಶಾಸಕರಾದ ಸಿ.ಸಿ.ಪಾಟೀಲ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಚಂದ್ರು ಲಮಾಣಿ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಶೀಲಾ ಬಿ, ವಿಶ್ವ ವಿದ್ಯಾಲಯದ ರೆಜಿಸ್ಟ್ರಾರ್ ಪ್ರೊ. ಬಸವರಾಜ ಲಕ್ಕಣ್ಣವರ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಎಸಿಎಫ್ ಅಶೋಕ, ಆರ್.ಎಫ್.ಓ, ಮಂಜುನಾಥ ಮೇಗಲಮನಿ, ಸಾಮಾಜಿಕ ಅರಣ್ಯ ಇಲಾಖೆಯ ಡಿಎಫ್‍ಓ ಸಂಗಮೇಶ ಪ್ರಭಾಕರ, ಪೊಲೀಸ ಇಲಾಖೆಯ ಡಿವೈಎಸ್‍ಪಿ ಎಂ.ಬಿ.ಸಂಕದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಜರಿದ್ದರು.

Share this Article