ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ನೀಡಲು ಅಕ್ಕಿ ದಾಸ್ತಾನು ಇರದ ಕಾರಣ ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿ ಹಾಗೂ ಐದು ಕೆಜಿಗೆ ಹಣವನ್ನು ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಬುಧವಾರ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಜುಲೈ ತಿಂಗಳಿನಿಂದಲೇ 5 ಕೆಜಿ ಅಕ್ಕಿ ಬದಲು ಹಣ ಹಾಕಲು ಸರ್ಕಾರ ತೀರ್ಮಾನಿಸಿದ್ದು, ಅಕ್ಕಿ ದಾಸ್ತಾನು ಆಗುವವರೆಗೂ ಹಣ ವಿತರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆ ಸಚಿವ ಕೆಎಚ್ ಮುನಿಯಪ್ಪ, ಅಕ್ಕಿ ಸಿಗುವುದು ಕಷ್ಟವಾಗಿದೆ. ಅಕ್ಕಿ ಕೊಡಲು ಕೆಲವರು ಒಪ್ಪಿದ್ದಾರೆ, ಕೆಲವರು ಒಪ್ಪಿಲ್ಲ. ಆದ್ದರಿಂದ ಐದು ಕೆಜಿ ಅಕ್ಕಿ – ಐದು ಕೆಜಿ ಅಕ್ಕಿ ಬದಲಿಗೆ ಹಣ ನೀಡಲಾಗುವುದು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ನಾನು ಕೇಂದ್ರ ಸರ್ಕಾರಕ್ಕೆ ಹಣ ಕೊಡ್ತೀವಿ ಅಕ್ಕಿ ಕೊಡಿ ಎಂದು ಮನವಿ ಮಾಡಿದ್ದೆ. ಆದರೆ, ಹೆಚ್ಚುವರಿ ಅಕ್ಕಿ ಕೊಡಲು ಆಗಲ್ಲ ಎಂದು ಅವರು ಹೇಳಿದರು. ಒಪನ್ ಟೆಂಡರ್‌ನಲ್ಲಿ ಕೆಜಿಗೆ 31 ರೂಪಾಯಿಯಂತೆ ಬೇರೆಯವರಿಗೆ ಅಕ್ಕಿಯನ್ನು ನೀಡಿದ್ದಾರೆ. ಆದರೆ, ನಾವು ಕೆಜಿಗೆ 34 ರೂಪಾಯಿ ಕೊಡ್ತೀವಿ ಅಂದ್ರು ಕೊಡಲಿಲ್ಲ. ಕೇಂದ್ರ ಸರ್ಕಾರ ಇದರಲ್ಲಿ ರಾಜಕೀಯ ಮಾಡಿದೆ ಎಂದು ಕಿಡಿಕಾರಿದರು.
ಅಕ್ಕಿ ದಾಸ್ತಾನು ಆಗುವವರೆಗೂ ಕೆಜಿ ಅಕ್ಕಿಗೆ 34 ರೂಪಾಯಿ, ಒಟ್ಟು ಐದು ಕೆಜಿಗೆ 170 ರೂ. ಅನ್ನು ಪ್ರತಿಯೊಬ್ಬರಿಗೂ ನೀಡಲು ತೀರ್ಮಾನ ಮಾಡಲಾಗಿದೆ. ಬಿಪಿಎಲ್ ಕಾರ್ಡ್‌ದಾರರ ಅಕೌಂಟ್‌ಗೆ ಹಣ ಹಾಕುತ್ತೇವೆ. ಜುಲೈ ಒಂದನೇ ತಾರೀಖು ಫಲಾನುಭವಿಗಳ ಅಕೌಂಟ್‌ಗೆ ಹಣ ಹಾಕುತ್ತೇವೆ. ಕೇಂದ್ರ ಸರ್ಕಾರ ಅಕ್ಕಿ ಕೊಡದ ಹಿನ್ನೆಲೆ ನಾವು ಮಾತು ಕೊಟ್ಟಿನಂತೆ ಜುಲೈ ತಿಂಗಳಲ್ಲಿ ಹಣ ಕೊಡ್ತೀವಿ. ಒಂದು ತಿಂಗಳಿಗೆ ಸರ್ಕಾರಕ್ಕೆ 800 ಕೋಟಿ ರೂ. ಖರ್ಚು ಆಗುತ್ತೆ. ಆದಷ್ಟು ಬೇಗ ಅಕ್ಕಿ ಕೊಡ್ತೀವಿ. ಅಕ್ಕಿ ಸಿಗುವವರೆಗೂ ಹಣ ಕೊಡ್ತೀವಿ ಎಂದು ಹೇಳಿದರು.