ಗದಗ: ಬಾಲಕಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ್ದ ಆರೋಪಿಗೆ 25 ವರ್ಷ ಜೈಲು

graochandan1@gmail.com
1 Min Read

ಗದಗ :  ಬಾಲಕಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿ, ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಗದಗ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 25 ವರ್ಷ ಜೈಲು ಹಾಗೂ ₹50 ಸಾವಿರ ದಂಡ ವಿಧಿಸಿದೆ.

ಸವದತ್ತಿ ತಾಲ್ಲೂಕಿನ ತೆರದಕೊಪ್ಪ ಗ್ರಾಮದ ಮೌಲಾಸಾಬ ದೊಡ್ಡಮನಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಆರೋಪಿಯು 12 ವರ್ಷದ ಬಾಲಕಿ ಮನೆಗೆ ತೆರಳಿ ಆಕೆಗೆ ಜೀವ ಬೆದರಿಕೆ ಹಾಕಿ ಒತ್ತಾಯಪೂರ್ವಕವಾಗಿ ಸವದತ್ತಿ ತಾಲ್ಲೂಕಿನ ಮುನವಳ್ಳಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಆಕೆಯನ್ನು ಬೈಕ್‌ನಲ್ಲಿ ಸಿಂದೋಗಿ ಕ್ರಾಸ್‌ ಬಳಿ ಇರುವ ಮನೆಗೆ ಕರೆದುಕೊಂಡು ಹೋಗಿ, ಪ್ರಜ್ಞೆ ತಪ್ಪಿಸುವ ಮಾತ್ರೆ ತಿನ್ನಿಸಿ ಬಳಿಕ ಅತ್ಯಾಚಾರ ಎಸಗಿದ್ದಾನೆ. ಆಕೆ ಎಚ್ಚರಗೊಂಡ ನಂತರ ಯಾರಿಗಾದರೂ ವಿಷಯ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ 2018ರಲ್ಲಿ ನರಗುಂದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸ ಸಿ. ಮೇಟಿ ಪ್ರಕರಣದ ತನಿಖೆ ನಡೆಸಿ, 27.07.2018ರಂದು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸಾಕ್ಷಿ ವಿಚಾರಣೆ ನಡೆದು ಆರೋಪಿ ಮಾಡಿದ ಅಪರಾಧ ಸಾಬೀತಾದ ಕಾರಣ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ರಾಜೇಶ್ವರ ಶೆಟ್ಟಿ ಅವರು ಸೋಮವಾರ ಅಪರಾಧಿಗೆ 25 ವರ್ಷ ಜೈಲು ಶಿಕ್ಷೆ, ₹50 ಸಾವಿರ ದಂಡ ವಿಧಿಸಿ ಜೂನ್‌ 24ರಂದು ತೀರ್ಪು ನೀಡಿದ್ದಾರೆ. ದಂಡದ ಹಣ ಕೊಡಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.

Share this Article