ಬೆಂಗಳೂರು: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು (ಕೆಎಸ್ಎಫ್ಸಿ) 2022 – 23ನೇ ಸಾಲಿನಲ್ಲಿ 138.78 ಕೋಟಿ ರೂ.ಗಳ ತೆರಿಗೆ ಪೂರ್ವ ಲಾಭ ಗಳಿಸಿದೆ. ಸಂಸ್ಥೆಯು 107.31 ಕೋಟಿ ರೂ.ಗಳ ತೆರಿಗೆ ನಂತರದ ದಾಖಲೆ ಲಾಭ ಗಳಿಸಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಏಕರೂಪ್ ಕೌರ್ ಹೇಳಿದರು.
ಸಂಸ್ಥೆಯ 64ನೇ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 2022-23ನೇ ವರ್ಷದ ಸಂಸ್ಥೆಯ ವಾರ್ಷಿಕ ಕಾರ್ಯಾಚರಣೆ ಹಾಗೂ ಪರಿಶೋಧಿಸಲ್ಪಟ್ಟ ಲೆಕ್ಕಪತ್ರಗಳ ಪ್ರಮುಖ ಅಂಶಗಳನ್ನು ಹಂಚಿಕೊಂಡರು.
“ಸಂಸ್ಥೆಯು ಕಳೆದ ವರ್ಷ ವಿವಿಧ ಸಾಲ ಯೋಜನೆಗಳ ಮೂಲಕ 901.10 ಕೋಟಿ ರೂ.ಗಳ ಸಾಲ ಮಂಜೂರಾತಿ ಮಾಡಿದ್ದು, ಇದರಲ್ಲಿ 874.68 ಕೋಟಿ ರೂ. ಮೊತ್ತದ ಮಂಜೂರಾತಿಯು 682 ಅತಿ ಸಣ್ಣ ಮತ್ತು ಸಣ್ಣ ಗಾತ್ರದ ಕೈಗಾರಿಕಾ ಘಟಕಗಳಿಗೆ ನೀಡಲಾಗಿದೆ,” ಎಂದು ವಿವರ ನೀಡಿದರು.
ಸಂಚಿತ ವಸೂಲಾತಿಯ ಮೊತ್ತವು 20,023.64 ಕೋಟಿ ರೂ.ಗಳಷ್ಟಾಗಿರುತ್ತದೆ. ಹಿಂದಿನ ಹಣಕಾಸು ವರ್ಷ, ಅಂದರೆ 2021 – 22ರಲ್ಲಿ ಶೇ. 4.74ರಷ್ಟು ಇದ್ದ ನಿವ್ವಳ ಅನುತ್ಪಾದಕ ಆಸ್ತಿಯು 2022 – 23ರಲ್ಲಿ ಶೇ. 3.51ಕ್ಕೆ ಇಳಿಕೆಯಾಗಿದೆ ಎಂದೂ ಅವರು ಮಾಹಿತಿ ಹಂಚಿಕೊಂಡರು.
“ಸಂಸ್ಥೆಯು ವಿವಿಧ ಬಡ್ಡಿ ಸಹಾಯಧನ ಯೋಜನೆಗಳಲ್ಲಿ 105 ಮಹಿಳಾ ಉದ್ಯಮಿಗಳಿಗೆ 131.13 ಕೋಟಿ ರೂ.ಗಳ ಸಾಲಕ್ಕೆ ಮಂಜೂರಾತಿ ನೀಡಿದೆ. ಇಲ್ಲಿಯವರೆಗೆ 1,048.48 ಕೋಟಿ ರೂ. ಸಂಚಿತ ನೆರವನ್ನು 1,357 ಮಹಿಳಾ ಉದ್ಯಮಿಗಳಿಗೆ ಒದಗಿಸಲಾಗಿದೆ,” ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಏಕರೂಪ್ ಕೌರ್ ತಿಳಿಸಿದರು.