ಗದಗ : ಗದಗ – ಬೆಟಗೇರಿ ಅವಳಿ ನಗರಕ್ಕೆ ಆದಷ್ಟು ಶೀಘ್ರ ನಿರಂತರ ನೀರು ಪೂರೈಕೆ ಮಾಡಿಕೊಡಲಾಗುವುದು. ಈಗಾಗಲೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಗದಗ ಮತಕ್ಷೇತ್ರದ ಶಾಸಕ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಪ್ರವಾಸೋದ್ಯಮ ಖಾತೆ ಸಚಿವರಾದ ಎಚ್.ಕೆ.ಪಾಟೀಲ ಹೇಳಿದರು.
ಪಕ್ಷದ ಕಾರ್ಯಾಲಯದ ಆವರಣದಲ್ಲಿ ಮತದಾರರ ಉಪಕಾರ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕುಡಿಯುವ ನೀರಿಗಾಗಿ ಜನರ ನೋವು ಏನೆಂಬುದು ತಿಳಿದಿದೆ. ನಿಮ್ಮೆಲ್ಲರ ಜನರ ಅಪೇಕ್ಷೆಗೆ ಅನುಗುಣವಾಗಿ ಕೆಲಸ ಮಾಡಿ ನೋವು ನಿವಾರಿಸುವೆ ಎಂದರು.
ಶಾಸಕರ ಸೇವಾ ತಂಡ ನಿರಂತರ:
ಮತದಾರರ ನೀಡಿದ ಆಶಿರ್ವಾದ ನನಗೆ ದೊಡ್ಡ ರಾಜಕೀಯ ಶಕ್ತಿಯನ್ನು ತಂದಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರು ದೇವರ ಸಮಾನ ಜನರ ಸೇವೆಯ ಮೂಲಕ ಸೇವೆಯ ವ್ಯಾಖ್ಯಾನ ಬದಲಿಸಿದ ಗದಗ ಶಾಸಕರ ಸೇವಾ ತಂಡದ ಕಾರ್ಯ ಮಾದರಿ. ಇದು ಇನ್ನು ಮುಂದೆ ನಿರಂತರವಾಗಿ ನಡೆಯಲಿದೆ ಅದಕ್ಕೆ ಟ್ರಸ್ಟ್ ಅಥವಾ ಸಂಘದ ಸ್ವರೂಪ ನೀಡಿ ಶಕ್ತಿ ತುಂಬಲಾಗುವುದು ಎಂದು ಘೋಷಿಸಿದರು.
ಗದಗ ಮತಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಲು ನಿಮ್ಮೆಲ್ಲರ ಸಲಹೆ ಸಹಕಾರ ಅಗತ್ಯ. ಈಗ ಅಪೂರ್ಣಗೊಂಡಿರುವ ಕೆಲಸಗಳನ್ನು ಪೂರ್ಣಗೊಳಿಸಿ ಜನರ ಸೇವೆಗೆ ಅರ್ಪಿಸಲಾಗುವದು.
ಬೆಟಗೇರಿ ಭಾಗದಲ್ಲಿ ವಸತಿ ಸಂಕೀರ್ಣ ನಿರ್ಮಾಣ:
ಬೆಟಗೇರಿ ಭಾಗದಲ್ಲಿ ಗಂಗಿಮಡಿ ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಿಸಲಾಗುವುದು. ಇದಕ್ಕಾಗಿ ಭೂಮಿ ಗುರುತಿಸಲು ನಾಳೆಯೇ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ಕರೆಯಲಾಗಿದೆ ಎಂದರು.
ಗದಗನ್ನು ಪ್ರವಾಸಿ ತಾಣವನ್ನಾಗಿಸಬೇಕೆಂಬ ಕೂಗು ಮೊದಲಿಂದಲೂ ಇತ್ತು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಪ್ರವಾಸೋಧ್ಯಮ ಖಾತೆ ನನಗೆ ಬಂದಿರುವದರಿಂದ ಬರಲಿರುವ ದಿನಗಳಲ್ಲಿ ಗದಗ ಮತಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ದಿ ಮಾಡುವೆ ಎಂದರು.
ಜನ ಸೇವೆಗೆ ಒಲಿದು ಬಂದ ಹುದ್ದೆ :
ತಮಗೆ ದೊರಕಿರುವ ಖಾತೆಯ ಬಗ್ಗೆ ವಿವರಿಸಿದ ಸಚಿವರು ಸಂವಿಧಾನ ಅಪಾಯ ಎದುರಿಸುವ ಇಂದಿನ ಕಾಲದಲ್ಲಿ ಸಂವಿಧಾನ ರಕ್ಷಿಸುವುದರ ಜೊತೆಗೆ ಸಂವಿಧಾನದ ಸದಾಶಯಗಳನ್ನು ಜಾರಿಗೊಳಿಸುವ ಮಹತ್ತರ ಜವಾಬ್ದಾರಿ ಬಂದಿದೆ. ಇದು ಸೇವೆಗೆ ಒಲಿದು ಬಂದ ಹುದ್ದೆ ಎಂದು ಸ್ವೀಕರಿಸುವೆ ಎಂದರು. ನನ್ನ ಕ್ಷೇತ್ರದ ಜನರ ಪ್ರೌಢಿಮೆ ಮತ್ತು ನನ್ನ ಅನುಭವ ಬಳಸಿ ನಿಮ್ಮ ಕಿರೀಟಕ್ಕೆ ಗರಿ ಮೂಡಿಸುವ ಕೆಲಸವನ್ನು ಮಾಡುವೆ ಎಂದು ವಿನಮ್ರವಾಗಿ ಹೇಳಿದರು.
ಮಾಜಿ ಶಾಸಕ ಡಿ.ಆರ್.ಪಾಟೀಲರು ಮಾತನಾಡಿ ಗದಗ ಮತಕ್ಷೇತ್ರದ ಮತದಾರರ ನೀಡಿದ ಬಲವನ್ನು ನಿಮ್ಮ ಸೇವೆಗೆ ಮುಡುಪಾಗಿ ಇಡುತ್ತೇವೆ ಎಂದರು. ಇದು ಉಪಕಾರ ಸ್ಮರಣೆ ಕಾರ್ಯಕ್ರಮ ಗದಗ ಮತಕ್ಷೇತ್ರವನ್ನು ಅಬಿವೃದ್ಧಿ ಮಾಡಬೇಕೆಂದು ಸಲಹೆ ಸೂಚನೆಗಳನ್ನು ನೀಡಿರಿ ಅದುವೇ ಎಚ್.ಕೆ.ಪಾಟೀಲರಿಗೆ ನೀಡುವ ಗೌರವ ಎಂದರು.
ಈ ಸಂಧರ್ಭದಲ್ಲಿ ಪಕ್ಷದ ವಿವಿಧ ಘಟಕಗಳ ಸದಸ್ಯರುಗಳು ಹಾಗೂ ಪದಾಧಿಕಾರಿಗಳು, ನಗರಸಭೆ ಸದಸ್ಯರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.