ಹೊಸದಿಲ್ಲಿ: ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನೂತನ ಸಂಸತ್ ಭವನ ಉದ್ಘಾಟನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಐತಿಹಾಸಿಕ ಸೆಂಗೋಲ್ (ರಾಜದಂಡ) ಅನ್ನು ಹೊಸ ಸಂಸತ್ ಕಟ್ಟಡದ ಸ್ಪೀಕರ್ ಆಸನದ ಸಮೀಪ ಪ್ರತಿಷ್ಠಾಪನೆ ಮಾಡಲಾಯಿತು.
ಬೆಳಿಗ್ಗೆ 7.30ಕ್ಕೆ ಹೊಸ ಸಂಸತ್ ಕಟ್ಟಡಕ್ಕೆ ತಲುಪಿದ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಪೂಜೆಗೆ ಕುಳಿತರು. ಅದಕ್ಕೂ ಮುನ್ನ ಮಹಾತ್ಮ ಗಾಂಧಿ ಪ್ರತಿಮೆಗೆ ವಂದನೆ ಸಲ್ಲಿಸಿದರು. ಪೂಜೆ ಮುಗಿದ ಬಳಿಕ ಮೋದಿ ಅವರು ಐತಿಹಾಸಿಕ ರಾಜದಂಡಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದರು.
ತಮಿಳುನಾಡಿನ ಅಧೀನಂ ಸ್ವಾಮೀಜಿಗಳು ‘ಸೆಂಗೋಲ್’ ಅನ್ನು ಪ್ರಧಾನಿಗೆ ಹಸ್ತಾಂತರ ಮಾಡಿದರು, ವಿಶೇಷ ಸಂದರ್ಭದಲ್ಲಿ ಅವರಿಗೆ ಆಶೀರ್ವಾದ ಮಾಡಿದರು. ಬಳಿಕ ಮೋದಿ ಅವರು ಐತಿಹಾಸಿಕ ರಾಜದಂಡವನ್ನು ಲೋಕಸಭೆ ಚೇಂಬರ್‌ಗೆ ಕರೆದೊಯ್ದು, ಸ್ಪೀಕರ್ ಆಸನದ ಪಕ್ಕದಲ್ಲಿ ಪ್ರತಿಷ್ಠಾಪಿಸಿದರು.
ಭವ್ಯ ನೂತನ ಸಂಸತ್ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದ ನಿರ್ಮಾಣ ಕಾರ್ಮಿಕರ ಗುಂಪನ್ನು ಪ್ರಧಾನಿ ಮೋದಿ ಸತ್ಕರಿಸಿದರು. ದೇಶದ ವಿವಿಧ ಭಾಗಗಳಿಂದ ಆಹ್ವಾನಿತರಾಗಿದ್ದ ಪುರೋಹಿತರು ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಇದೇ ವೇಳೆ ಹಲವು ಧರ್ಮಗಳ ಪ್ರತಿನಿಧಿಗಳು ಬಹು- ಧಾರ್ಮಿಕ ಪ್ರಾರ್ಥನಾ ಗೀತೆಗಳನ್ನು ಹಾಡಿದರು.
ಲೋಕಸಭೆ ಹಾಗೂ ರಾಜ್ಯಸಭೆಯ ನೆಲಕ್ಕೆ ಹಾಸಲಾಗಿರುವ ಕಾರ್ಪೆಟ್‌ಗಳು ಕೂಡ ವಿಶೇಷ ಆಕರ್ಷಣೆಗಳಾಗಿವೆ. ಉತ್ತರ ಪ್ರದೇಶದ ಸುಮಾರು 900 ಕುಶಲಕರ್ಮಿಗಳು ಅಂದಾಜು 10 ಲಕ್ಷ ಮಾನವ ಗಂಟೆಗಳ ಕಾಲ ಕೈಯಿಂದ ಈ ಕಾರ್ಪೆಟ್‌ಗಳನ್ನು ನೇಯ್ದಿದ್ದಾರೆ. ಈ ಕಾರ್ಪೆಟ್‌ಗಳಲ್ಲಿ ರಾಷ್ಟ್ರಪಕ್ಷಿ ನವಿಲು ಮತ್ತು ರಾಷ್ಟ್ರೀಯ ಹೂವು ಕಮಲದ ಚಿತ್ರಗಳನ್ನು ಹೆಣೆಯಲಾಗಿದೆ. ಪ್ರತಿ ಚದರ ಇಂಚಿಗೆ 120 ಹೆಣಿಗೆಗಳಂತೆ ಒಟ್ಟಾರೆ 60 ಕೋಟಿಗೂ ಅಧಿಕ ಹೆಣಿಗೆಗಳನ್ನು ಹಾಕಲಾಗಿದೆ.
2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಮಧ್ಯಭಾಗದಲ್ಲಿ ಯೋಜನೆ ಆರಂಭವಾಗಿತ್ತು. 2021ರ ಸೆಪ್ಟೆಂಬರ್‌ನಲ್ಲಿ ನೇಯ್ಗೆ ಕಾರ್ಯ ಆರಂಭವಾಗಿದ್ದು, 2022ರ ಮೇ ವೇಳೆಗೆ ಮುಗಿದಿತ್ತು. 2022ರ ನವೆಂಬರ್‌ನಲ್ಲಿ ಅವುಗಳ ಅಳವಡಿಕೆ ಕಾರ್ಯ ಶುರುವಾಗಿತ್ತು. ಅವುಗಳಲ್ಲಿ ನವಿಲು ಮತ್ತು ಕಮಲದ ಚಿತ್ರಗಳನ್ನು ಏಳು ತಿಂಗಳ ಕಾಲ ಶ್ರಮಪಟ್ಟು ಕಾರ್ಪೆಟ್‌ಗಳಲ್ಲಿ ಮೂಡಿಸಲಾಗಿದೆ.
ಕಲ್ಲಿನ ಕೆತ್ತನೆಯ ಕಾರ್ಯಗಳನ್ನು ರಾಜಸ್ಥಾನದ ಶಿಲ್ಪಿಗಳು ನಡೆಸಿದ್ದಾರೆ. ಬಿದಿರಿನ ಕಾರ್ಪೆಟ್‌ಗಳನ್ನು ತ್ರಿಪುರಾದ ಕಲಾವಿದರು ಒದಗಿಸಿದ್ದಾರೆ. ತೇಗದ ಮರಗಳನ್ನು ಮಹಾರಾಷ್ಟ್ರದ ನಾಗಪುರದಿಂದ ತರಿಸಲಾಗಿದೆ.
ಹಳೆಯ ಸಂಸತ್ ಕಟ್ಟಡವನ್ನು 1927ರಲ್ಲಿ ನಿರ್ಮಿಸಲಾಗಿದ್ದು, ಅದಕ್ಕೆ ಈಗ 96 ವರ್ಷ. ಹಳೆಯದಾಗಿರುವ ಕಟ್ಟಡದಲ್ಲಿ ಈಗಿನ ಅವಶ್ಯಕತೆಗಳಿಗೆ ಸಾಕಷ್ಟು ಸ್ಥಳಾವಕಾಶ ಇಲ್ಲದ ಕಾರಣ ಹಲವು ದಶಕಗಳ ಹಿಂದೆಯೇ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಮಾಡಲಾಗಿತ್ತು. ನೂತನ ಕಟ್ಟಡದಲ್ಲಿ 888 ಲೋಕಸಭಾ ಸದಸ್ಯರು, 300 ರಾಜ್ಯಸಭಾ ಸಂಸದರು ಕೂರಲು ಸ್ಥಳಾವಕಾಶವಿದೆ. ಲೋಕಸಭೆ ಚೇಂಬರ್‌ನಲ್ಲಿ ಜಂಟಿ ಅಧಿವೇನದಲ್ಲಿ ಒಟ್ಟಿಗೆ 1280 ಸಂಸದರು ಕೂರುವಷ್ಟು ಜಾಗವಿದೆ.