ಮೈಸೂರು : ಕೇರಳದಿಂದ ಕಾರಿನಲ್ಲಿ ತಂದು ಮೈಸೂರಿನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ, ಸುಮಾರು 25 ಕೋಟಿ ಬೆಲೆಬಾಳುವ ತಿಮಿಂಗಿಲದ ವಾಂತಿಯನ್ನು (ಅಂಬರ್ ಗ್ರೀಸ್) ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತಂತೆ, ಪೊಲೀಸರಿಗೆ ಮೊದಲೇ ಮಾಹಿತಿ ಇದ್ದಿದ್ದರಿಂದ ಗುಪ್ತವಾಗಿ ಕಾರ್ಯಾಚರಣೆ ನಡೆಸಿ ಕೇರಳ ಮೂಲದ ಆರೋಪಿಗಳನ್ನು ಹಾಗೂ ಅವರೊಂದಿಗಿದ್ದ ಅಂಬರ್ ಗ್ರೀಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೇರಳ ರಾಜ್ಯದ ಕೊಚ್ಚಿನ್ ಸಮುದ್ರದಿಂದ ತಿಮಿಂಗಿಲದ ಅಂಬರ್ ಗ್ರೀಸ್ ತಂದಿರುವ ಮಾಹಿತಿ ಲಭ್ಯವಾಗಿತ್ತು. ಆರೋಪಿಗಳು ಕೇರಳದಿಂದ ಈ ವಸ್ತುವನ್ನು ಮೈಸೂರಿಗೆ ತಂದು ಮಾರಾಟ ಮಾಡಲು ಯತ್ನಿಸಿದ್ದರು. ಇವರನ್ನು ಹಿಡಿಯಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಹೆಚ್ಚುವರಿ ಎಸ್ಪಿ ನಂದಿನಿ, ಡಿವೈಎಸ್ ಪಿ ಮಹೇಶ್ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು.
ಹೆಚ್.ಡಿ.ಕೋಟೆ ಇನ್ಸ್ ಪಕ್ಟರ್ ಶಬ್ಬೀರ್ ಹುಸೇನ್ ಮೈಸೂರು ಕ್ರೈಂಬ್ರಾಂಚ್ ಇನ್ಸ್ ಪೆಕ್ಟರ್ ಪುರುಷೋತ್ತಮ ಅವರಿಗೆ ತಂಡದ ನೇತೃತ್ವ ನೀಡಲಾಗಿತ್ತು. ಹೆಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್ ನಲ್ಲಿ ಸಮವಸ್ತ್ರ ಧರಿಸದೆ ಸಾಧಾರಣ ವ್ಯಕ್ತಿಗಳಂತೆ ನಿಂತಿದ್ದ ಪೊಲೀಸರು, ಅಂಬರ್ ಗ್ರೀಸ್ ತುಂಬಿದ್ದ ವಾಹನ ಬರುವುದನ್ನೇ ಕಾಯುತ್ತಿದ್ದರು. ಕಾರು ಬಂದ ಕೂಡಲೇ ಮಿಂಚಿನ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಗಳನ್ನು ಮಾಲು ಸಮೇತ ಹಿಡಿದಿದ್ದಾರಲ್ಲದೆ ಸುಮಾರು ಒಂಭತ್ತೂವರೆ ಕೆಜಿಯಷ್ಟು, ಅಂದಾಜು 25 ಕೋಟಿ ರೂ.ಗಳಷ್ಟು ಮೌಲ್ಯದ ಅಂಬರ್ ಗ್ರೀಸ್ ಅನ್ನು ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆಯಲಾಗಿರುವುದು ಅಂಬರ್ ಗ್ರೀಸ್ ಎಂದು ಕರೆಯಲಾಗಿದೆ.
ಕೇರಳ ಮೂಲದ ಮೂವರು ಆರೋಪಿಗಳ ಪೈಕಿ ಇಬ್ಬರು ಹಡಗು ನಡೆಸುವ ನಾವಿಕರೆಂದು ಹೇಳಲಾಗಿದೆ. ಆರೋಪಿಗಳ ಹೆಸರುಗಳನ್ನು ಪೊಲೀಸರು ಬಹಿರಂಗಗೊಳಿಸಿಲ್ಲ. ಅಂಬರ್ ಗ್ರೀಸ್ ಗೆ ವಿದೇಶದಲ್ಲೂ ಅಪಾರವಾದ ಬೇಡಿಕೆ ಮತ್ತು ಅಧಿಕ ಬೆಲೆ ಕೂಡ ಇದೆ.
ಅಂಬರ್ ಗ್ರೀಸ್ ಎಂಬ ವಸ್ತುವು ಮೇಣದಂಥ ವಸ್ತುವಾಗಿದ್ದು, ಇದನ್ನು ಪ್ರಸಾದನ ಸಾಮಗ್ರಿಗಳ ತಯಾರಿಕೆ, ಸುಗಂಧದ್ರವ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕಚ್ಚಾವಸ್ತುವಾಗಿದ್ದಾಗಲೂ ಅಂಬರ್ ಗ್ರೀಸ್ ಕೊಂಚ ಸುವಾಸನೆ ಬೀರುವಂಥದ್ದಾಗಿರುತ್ತದೆ. ಕೆಲವು ದೇಶಗಳಲ್ಲಿ ಕಾಮೋತ್ತೇಜಕ ವಸ್ತುಗಳಲ್ಲಿಯೂ ಇದನ್ನು ಬಳಸಲಾಗುತ್ತದೆ.
ಆದರೆ, ಇದು ಸಿಗುವುದು ಬಲು ಅಪರೂಪ. ಏಕೆಂದರೆ, ತಿಮಿಂಗಲಗಳು ಸಮುದ್ರದಲ್ಲಿ ವಾಂತಿ ಮಾಡಿಕೊಳ್ಳುವುದು ಅಪರೂಪ ಹಾಗೂ ಅವು ಜನಸಾಮಾನ್ಯರಿಗೆ ಸಿಗುವುದು ತುಂಬಾ ವಿರಳ. ಹಾಗಾಗಿ, ಈ ವಸ್ತುವಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಆದರೆ, ಕಳ್ಳಸಾಗಣೆದಾರರು ಅಂಬರ್ ಗ್ರೀಸ್ ಗಾಗಿ ಸಮುದ್ರಗಳಿಗೆ ದಾಂಗುಡಿ ಇಡುವುದನ್ನು ತಪ್ಪಿಸಲು ಬಹುತೇಕ ದೇಶಗಳು ಇದರ ಮಾರಾಟವನ್ನು ನಿಷೇಧಿಸಿವೆ. ಹಾಗಾಗಿ, ಇದು ಕಳ್ಳಸಾಗಣೆಯಾಗುತ್ತಿದೆ.