ಕ್ರಿಕೆಟ್ ಟರ್ಫ ಗ್ರೌಂಡ್ ಸದುಪಯೋಗವನ್ನು ಯುವ ಕ್ರಿಕೆಟ್‍ ಪಟುಗಳು ಪಡೆದುಕೊಳ್ಳಿ

ಸಮಗ್ರ ಪ್ರಭ ಸುದ್ದಿ
2 Min Read

 

ಜಾನೋಪಂತರ ಕ್ರಿಕೆಟ್ ಅಡಾಕೆಮಿ, ಗದಗ ಕ್ರಿಕೆಟರ್ಸ್ ಕ್ಲಬ್‍ಗಳು ಆಯೋಜಿಸಲಾಗಿದ್ದ ಕ್ರಿಕೆಟ್ ಬೇಸಿಗೆ ಶಿಬಿರಗಳ ಜಂಟಿ ಸಮಾರೋಪ ಸಮಾರಂಭ

ಗದಗ : ಕ್ರೀಡಾ ಕ್ಷೇತ್ರ ಇಂದು ಜಾಗತಿಕ ಮಟ್ಟದಲ್ಲಿ ಸಾಧಕರನ್ನು ಗುರುತಿಸುವಂತಾಗಿದ್ದು ಹಾಗಾಗಿ ಅಲ್ಲಿಯೂ ವ್ಯಾಪಕವಾದ ಸ್ಪರ್ಧೆ ಇದ್ದು ಮಕ್ಕಳು ಸತತ ಮತ್ತು ಕಠಿಣ ಪರಿಶ್ರಮ ಪಡಬೇಕು ಎಂದು ಯುವ ಕಾಂಗ್ರೆಸ್ ಮುಖಂಡ ಕೃಷ್ಣಗೌಡ ಪಾಟೀಲ ಹೇಳಿದರು.
ಅವರು ಹುಬ್ಬಳ್ಳಿ ರಸ್ತೆಯಲ್ಲಿ ಕ್ರೀಡಾ ಇಲಾಖೆಯಿಂದ ನಿರ್ಮಿತವಾಗಿರುವ ಕ್ರಿಕೆಟ್ ಅಭ್ಯಾಸ ಮೈದಾನದಲ್ಲಿ ಇತ್ತೀಚೆಗೆ ಜಾನೋಪಂತರ ಕ್ರಿಕೆಟ್ ಅಡಾಕೆಮಿ, ಗದಗ ಕ್ರಿಕೆಟರ್ಸ್ ಕ್ಲಬ್‍ಗಳು ಆಯೋಜಿಸಲಾಗಿದ್ದ ಕ್ರಿಕೆಟ್ ಬೇಸಿಗೆ ಶಿಬಿರಗಳ ಜಂಟಿ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಅದರಲ್ಲಿಯೂ ಕ್ರಿಕೆಟ್ ಕ್ಷೇತ್ರದಲ್ಲಿ ದಿನ ದಿನಕ್ಕೂ ಸ್ಪರ್ಧೆ ಅತ್ಯಂತ ತೀವ್ರವಾಗಿ ಬೆಳೆಯುತ್ತಿದ್ದು, ಮಕ್ಕಳು ಅತ್ಯಂತ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ತಮ್ಮ ಸ್ಥಿರ ಪ್ರದರ್ಶನವನ್ನು ತೋರ್ಪಡಿಸಿದಾಗ ಮಾತ್ರ ಕ್ರಿಕೆಟ್ ಕ್ಷೇತ್ರದಲ್ಲಿ ಉನ್ನತವಾದ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಗದಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಗ್ರಾಮೀಣ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಶಾಸಕ ಎಚ್. ಕೆ. ಪಾಟೀಲರು ಗದಗ, ಮುಳಗುಂದ ಹಾಗೂ ಹುಲಕೋಟಿಯಲ್ಲಿ ಟರ್ಫ ಗ್ರೌಂಡ್ ಸಿದ್ಧಪಡಿಸಿದ್ದಾರೆ ಇದರ ಸದುಪಯೋಗವನ್ನು ಯುವ ಕ್ರಿಕೆಟ್‍ಪಟುಗಳು ಪಡೆಯಬೇಕು ಎಂದರು.
ಐಪಿಎಲ್ ಮತ್ತು ಬಿಸಿಸಿಐ ಪ್ಯಾನಲ್ ಅಂಪೈರ್ ಆದ ಹುಬ್ಬಳ್ಳಿಯ ಅಭಿಜಿತ ಬೆಂಗೇರಿ ಮಾತನಾಡಿ ಕ್ರಿಕೆಟ್ ಎನ್ನುವುದು ತಪ್ಪಸ್ಸು ಇದ್ದಂತೆ, ಇಲ್ಲಿ ತಕ್ಷಣವೇ ಪ್ರತಿಫಲ ಸಿಕ್ಕು ಬಿಡುತ್ತದೆ ಎನ್ನುವ ತಪ್ಪು ಗ್ರಹಿಕೆಯನ್ನು ಪಾಲಕರು ಮತ್ತು ಮಕ್ಕಳು ತೆಗೆದುಹಾಕಬೇಕು, ಕೆಲವು ಜನರಿಗೆ ಕೆಲವು ಸಂದರ್ಭದಲ್ಲಿ ಕ್ರಿಕೆಟ್ ಪ್ರತಿಭೆ ಅನಾವರಣವಾಗುತ್ತದೆ, ಅದಕ್ಕಾಗಿ ತಾಳ್ಮೆಯಿಂದ ನಿರಂತರವಾಗಿ ಕ್ರಿಕೆಟ್ ತರಬೇತಿ ಮತ್ತು ಪ್ರ್ಯಾಕ್ಟೀಸ್ ಮಾಡುತ್ತಿರಬೇಕು ಎಂದ ಅವರು ಮಕ್ಕಳಿಗೆ ವಿಶೇಷ ಸಲಹೆಗಳನ್ನು ನೀಡಿದರು.

ಕೆಎಸ್‍ಸಿಎ ಧಾರವಾಡ ವಲಯ ನಿಯಂತ್ರಕರು ಹಾಗೂ ಸಂಚಾಲಕರಾದ ನಿಖಿಲ್ ಭೂಸದ ಮಾತನಾಡಿ ಕ್ರಿಕೆಟ್‍ ನೊಟ್ಟಿಗೆ ಮಕ್ಕಳು ತಮ್ಮ ನಿತ್ಯದ ವಿದ್ಯಾಭ್ಯಾಸದ ಕಡೆಗೂ ಗಮನ ನೀಡಬೇಕು, ಜೀವನದಲ್ಲಿ ವಿದ್ಯೆಯೂ ಕೂಡಾ ಬಹಳ ಮುಖ್ಯವಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ಕ್ರಿಕೆಟ್‍ನಲ್ಲಿ ಭವಿಷ್ಯ ಜೊತೆಜೊತೆಗೆ ಅವರ ವಿದ್ಯಾಭ್ಯಾಸದ ಕಡೆಗೂ ಗಮನ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಸಿಸಿಐ ಹಾಗೂ ಪ್ರಸ್ತುತ ನಡೆಯುತ್ತಿರುವ ಟಾಟಾ ಐಪಿಎಲ್-2023 ಪ್ಯಾನಲ್ ಅಂಪೈರಿಂಗ್‍ನಲ್ಲಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅಭಿಜಿತ ಬೆಂಗೇರಿ ಅವರನ್ನು ಎರಡು ಕ್ಲಬ್‍ಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಈ ಕ್ಲಬ್‍ಗಳಲ್ಲಿ ಬೇಸಿಗೆ ತರಬೇತಿ ಶಿಬಿರ ಪೂರ್ಣಗೊಳಿಸಿದ 70 ಕ್ಕೂ ಹೆಚ್ಚಿನ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆಗಳನ್ನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ತರಬೇತುದಾರರಾದ ವೀರಣ್ಣ ಜಾನೋಪಂತರ, ಮಲ್ಲಿಕಾರ್ಜುನ ಭೂಪಾನಿ, ಜಾನೋಪಂತರ ಅಕಾಡೆಮಿಯ ಮಹಾಂತೇಶ ಹಾನಗಲ್ಲ ಹಾಜರಿದ್ದರು. ಹಿರಿಯ ಆಟಗಾರರಾದ ಅಮಿತ್ ಭೂಸದ, ವಿಶಾಲ ಕಬಾಡಿ, ವಿನಯ ಬಾರಕೇರ, ಬಸವರಾಜ ಸವಡಿ, ರಘು ಮೇರವಾಡೆ, ಆದಿತ್ಯ ಜೋಶಿ, ವರದರಾಜ ಪತ್ತೇಪೂರ, ಹುಸೇನ ಸರ್ಕಾವಸ, ಪ್ರಸಾದ ಕಲಬುರ್ಗಿ, ಪವನ್ ಕೊರಳ್ಳಿ, ಸತೀಶಕುಮಾರ ಮಾಳೋದೆ, ಪ್ರಲ್ಹಾದ ಕುಲಕರ್ಣಿ, ಪರಶುರಾಮ ಕಟ್ಟಿಮನಿ, ಹುಲಕೋಟಿ ನೆಟ್ಸ್‍ನ ವ್ಯವಸ್ಥಾಪಕರಾದ ಮುದಸರ್ ಹಾಗೂ ಎರಡೂ ಕ್ಲಬ್‍ನ ಸದಸ್ಯರು, ಪಾಲಕರು ಮತ್ತು ಶಿಬಿರಾರ್ಥಿಗಳು, ಬೆಂಬಲಾರ್ಥಿಗಳು ಹಾಜರಿದ್ದರು. ಶಿವಕುಮಾರ ಕುಷ್ಟಗಿ ಸ್ವಾಗತಿಸಿ, ನಿರೂಪಿಸಿದರು. ಮಲ್ಲಿಕಾರ್ಜುನ ಭೂಪಾನಿ ವಂದಿಸಿದರು.

Share this Article