ಜೈಪುರ: ಇಲ್ಲಿನ ಯೋಜನಾ ಭವನದ ನೆಲಮಾಳಿಗೆಯಲ್ಲಿ ಬೀಗ ಹಾಕಲಾಗಿದ್ದ ಅಲ್ಮೇರಾದಿಂದ ₹ 2.31 ಕೋಟಿಗೂ ಹೆಚ್ಚು ನಗದು ಮತ್ತು ಒಂದು ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ, ನೆಲಮಾಳಿಗೆಗೆ ಪ್ರವೇಶ ಹೊಂದಿರುವ ಯೋಜನಾ ಭವನದ ಏಳು ಉದ್ಯೋಗಿಗಳನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ದಿಡೀರ್ ಬೆಳವಣಿಗೆಯೊಂದರಲ್ಲಿ, ಆರ್ಬಿಐ 2 ಸಾವಿರ ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಬಳಿಕ ಈ ಪ್ರಕರಣ ನಡೆದಿದೆ. ಅಲ್ಮೇರಾದಲ್ಲಿ ಇರಿಸಲಾಗಿದ್ದ ಟ್ರಾಲಿ ಸೂಟ್ಕೇಸ್ನಲ್ಲಿ 2 ಸಾವಿರ ಹಾಗೂ 5 ರೂ ಮುಖಬೆಲೆಯ ನೋಟುಗಳಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಖ್ಯ ಕಾರ್ಯದರ್ಶಿ ಉಷಾ ಶರ್ಮಾ, ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದಿನೇಶ್ ಎಂಎನ್ ಮತ್ತು ಜೈಪುರ ಕಮಿಷನರ್ ಆನಂದ ಶ್ರೀವಾಸ್ತವ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು.
” ಒಂದು ಅಲ್ಮೆರಾದಿಂದ ಫೈಲ್ಗಳು ಮತ್ತು ಟ್ರಾಲಿ ಸೂಟ್ಕೇಸ್ನಲ್ಲಿ ₹ 2.31 ಕೋಟಿ ರೂ ನಗದು ಮತ್ತು 1 ಕೆಜಿ ಚಿನ್ನ ತುಂಬಿರುವುದು ಕಂಡುಬಂದಿದೆ. ಇದನ್ನು ಗಮನಿಸಿದ ನೌಕರರು ಅಶೋಕ್ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕಡತಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಲಾಗುತ್ತಿದೆ. ಬೀಗ ಹಾಕಲಾಗಿದ್ದ ಎರಡು ಕಪಾಟುಗಳನ್ನು ಇಂದು ತೆರೆಯಲಾಗಿದೆ. ಪ್ರಕರಣ ಸಂಬಂಧ 7 ನೌಕರರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದೇವೆ” ಎಂದು ಜೈಪುರ ಕಮಿಷನರ್ ಆನಂದ್ ಶ್ರೀವಾಸ್ತವ್ ಹೇಳಿದ್ದಾರೆ.
ಇಲ್ಲಿ ಪತ್ತೆಯಾಗಿರುವ ಹಣ ಯಾರದ್ದು, ಹೇಗೆ ಬಂತು ಎಂದು ತನಿಖೆ ನಡೆಸಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಈ ವಾರ್ಡ್ ರೋಬ್ ಅನ್ನು ಬಹಳ ಸಮಯದಿಂದ ಮುಚ್ಚಲಾಗಿದೆ. ಎರಡು ಅಥವಾ ಮೂರು ವರ್ಷಗಳಿಂದ ಮುಚ್ಚಿದಂತೆ ತೋರುತ್ತದೆ, ”ಎಂದು ಡಿಸಿ ಶ್ರೀವಾಸ್ತವ್ ಅವರು ಹೇಳಿದರು.
ಪ್ರತಿಪಕ್ಷ ಈ ವಿಷಯದ ಬಗ್ಗೆ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿದೆ. ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್ ಅವರು ಟ್ವೀಟ್ನಲ್ಲಿ, “ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರ ಭ್ರಷ್ಟಾಚಾರಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂಬುದಕ್ಕೆ ಸಾಕ್ಷಿ” ಎಂದು ವಾಗ್ದಾಳಿ ನಡೆಸಿದರು. ಯೋಜನಾ ಭವನಕ್ಕೆ ಇಷ್ಟು ದೊಡ್ಡ ಮೊತ್ತದ ನಗದು ಮತ್ತು ಚಿನ್ನ ಹೇಗೆ ತಲುಪಿತು ಎಂಬುದನ್ನು ಮುಖ್ಯಮಂತ್ರಿಗಳು ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.