ನರಗುಂದ ಮತ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ: ಸಖಿ,ಯುವ ಮತಗಟ್ಟೆಗಳಿಗೆ ಸ್ಪಂದನೆ: ಶತಾಯುಷಿ ಅಜ್ಜಿಯರಿಂದಲೂ ಮತದಾನ
ಗದಗ : ಜಿಲ್ಲೆಯ 956 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಯಾವುದೇ ತೊಂದರೆಯಾಗದಂತೆ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದಲ್ಲಿ 249, ಗದಗ 221, ರೋಣ 266 ಹಾಗೂ ನರಗುಂದ 220 ಮತಗಟ್ಟೆ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 956 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿತ್ತು. ಮತದಾನಕ್ಕಾಗಿ ಮತಗಟ್ಟೆ ಅಧಿಕಾರಿ ಸಿಬ್ಬಂದಿಯಿಂದ ವ್ಯವಸ್ಥಿತ ಮುಕ್ತ ನ್ಯಾಯ ಸಮ್ಮತ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡು, ಮತದಾನ ಸರಿಯಾದ ಸಮಯಕ್ಕೆ ಆರಂಭಿಸಲಾಯಿತು.
ಬೆಳಗಿನ ವೇಳೆ ಮತಗಟ್ಟೆಗಳತ್ತ ಮತದಾರ ಪ್ರಭುಗಳು ಉತ್ಸಾಹದಿಂದ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಲು ಮುಂದಾಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮಧ್ಯಾಹ್ನದ ವೇಳೆ ಬಿಸಿಲಿನ ತಾಪಕ್ಕೆ ಮತದಾನ ನಿಧಾನ ಗತಿಯಲ್ಲಿ ಸಾಗಿ ನಂತರ ಸಂಜೆ ಮತದಾನವು ತುರುಸಿನಿಂದ ಜರುಗಿತು.
ಮತದಾರರ ಆಕರ್ಷಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲೆಯ 4 ಕ್ಷೇತ್ರಗಳಲ್ಲಿ ವಿಭಿನ್ನ ಪರಿಕಲ್ಪನೆಯ ಮತಗಟ್ಟೆ ತೆರೆಯಲಾಗಿತ್ತು. ಸಖಿ ಮತಗಟ್ಟೆ, ಯುವ ಮತಗಟ್ಟೆ, ವಿಕಲಚೇತನ ಮತಗಟ್ಟೆ ಹಾಗೂ ಐತಿಹಾಸಿಕ ಮತಗಟ್ಟೆ ತೆರೆದು ಮತದಾನಕ್ಕೆ ಪ್ರೇರೇಪಣೆಯಾದವು.
ಸಮಯವಾರು ಕ್ಷೇತ್ರವಾರು ಮತದಾನದ ವಿವರ:
ಬೆಳಿಗ್ಗೆ 9 ಗಂಟೆಯವರೆಗೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 4.85, ಗದಗ-ಶೇ. 9.82, ರೋಣ- ಶೇ. 7.17, ನರಗುಂದ -ಶೇ. 7.20, ಜಿಲ್ಲೆಯಲ್ಲಿ ಸರಾಸರಿ ಶೇ. 7.25 ರಷ್ಟು ಮತದಾನ ದಾಖಲಾಯಿತು. ಬೆಳಿಗ್ಗೆ 11 ಗಂಟೆಯವರೆಗೆ ಶಿರಹಟ್ಟಿ- ಶೇ. 16.17, ಗದಗ- ಶೇ. 22.63 ರೋಣ- ಶೇ. 22.04, ನರಗುಂದ ಶೇ. 24.28, ಜಿಲ್ಲಾ ಸರಾಸರಿ ಶೇ.- 21.14 ರಷ್ಟು ಮತದಾನ ದಾಖಲಾಯಿತು.
ಮಧ್ಯಾಹ್ನ 1 ಗಂಟೆಯವರೆಗೆ ಶಿರಹಟ್ಟಿ- ಶೇ. 33.16, ಗದಗ- ಶೇ.40.50, ರೋಣ- ಶೇ.40.46, ನರಗುಂದ ಶೇ. 42.41, ಜಿಲ್ಲಾ ಸರಾಸರಿ ಶೇ.- 38.98 ರಷ್ಟು ಮತದಾನ ದಾಖಲಾಯಿತು. ಮಧ್ಯಾಹ್ನ 3 ಗಂಟೆಯವರೆಗೆ ಶಿರಹಟ್ಟಿ ವಿಧಾನ ಸಭಾ ಕ್ಷೇತ್ರ ಶೇ.49.29, ಗದಗ ವಿಧಾನ ಸಭಾ ಕ್ಷೇತ್ರ ಶೇ. 56.12, ರೋಣ ವಿಧಾನ ಸಭಾ ಕ್ಷೇತ್ರ ಶೇ. 56.12 ಹಾಗೂ ನರಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ಶೇ.59.39, ಜಿಲ್ಲಾ ಸರಾಸರಿ 55.04 ರಷ್ಟು ಮತದಾನ ದಾಖಲಾಯಿತು.
ಸಾಯಂಕಾಲ 5 ಗಂಟೆಯವರೆಗೆ ಶಿರಹಟ್ಟಿ- ಶೇ. 63.02, ಗದಗ-ಶೇ. 69.19. ರೋಣ- ಶೇ.68.23, ನರಗುಂದ-ಶೇ. 73.73, ಜಿಲ್ಲಾ ಸರಾಸರಿ ಶೇ. 68.30 ರಷ್ಟು ಮತದಾನ ದಾಖಲಾಯಿತು.
ಸಂಜೆ 7 ಗಂಟೆಯವರೆಗೆ ಶೇಕಡಾವಾರು ಮತದಾನ
65- ಶಿರಹಟ್ಟಿ- ಶೇ. 73.56,
66-ಗದಗ- ಶೇ. 70.47,
67-ರೋಣ- ಶೇ. 75.75
68-ನರಗುಂದ -ಶೇ.79.30 ದಾಖಲಾಯಿತು.
ಸಖಿ, ಯುವ ಹಾಗೂ ಸಾಂಪ್ರದಾಯಿಕ ಮತಗಟ್ಟೆಗಳಿಗೆ ಉತ್ತಮ ಸ್ಪಂದನೆ:
ಮತದಾರರನ್ನು ಜಾಗೃತಿಗೊಳಿಸಲು ಸ್ವೀಪ ಸಮಿತಿ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಜಾಗೃತಿ ಮೂಡಿಸಲಾಗಿತ್ತು. ವಿಭಿನ್ನ ಪರಿಕಲ್ಪನೆಯಡಿ ಜಿಲ್ಲೆಯ ಆಯ್ದ ಮತಟ್ಟೆಗಳಲ್ಲಿ ಸಖಿ ಮತಗಟ್ಟೆ, ಯುವ ಮತಗಟ್ಟೆ, ವಿಕಲಚೇತನ ಮತಗಟ್ಟೆ ಹಾಗೂ ಸಾಂಪ್ರದಾಯಿಕ ಮತಗಟ್ಟೆಗಳನ್ನು ನಿರ್ಮಿಸುವ ಮೂಲಕ ಮತಗಟ್ಟೆಗಳು ಆಕರ್ಷಣೆಗೊಳಪಟ್ಟು ಮತದಾರರಿಂದ ಉತ್ತಮ ಸ್ಪಂಧನೆ ದೊರೆಯಿತು.
ಶತಾಯುಷಿ ಅಜ್ಜಿಯರಿಂದ ಮತದಾನ:
ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮದ 105 ವರ್ಷದ ಅಜ್ಜಿ ಮತದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಜಕ್ಕಲಿ ಗ್ರಾಮದ ಬಸಲಿಂಗಮ್ಮ ಪಟ್ಟಣಶೆಟ್ಟಿ ಅಜ್ಜಿಯು ವ್ಹೀಲ್ ಚೇರ ಬೇಡ, ಮನೆಯಲ್ಲೆ ಮತದಾನ ಮಾಡುವುದು ಬೇಡ ಅಂತಾ ತಾನೆ ಕುಟುಂಬದ ಜೊತೆಗೆ ಬಂದು ಮತದಾನ ಮಾಡುವ ಮೂಲಕ ಮತ ಚಲಾವಣೆಗೆ ನಿಜವಾದ ಅರ್ಥ ತಂದಿದ್ದಾಳೆ ಅಜ್ಜಿಯ ಕಾರ್ಯಕ್ಕೆ ಗ್ರಾಮಸ್ಥರು ಹಾಗೂ ಅಧಿಕಾರಿ ವರ್ಗದವರು ಶ್ಯಲ್ಯೂಟ್ ಮಾಡಿದ್ದಾರೆ.
ಹೊಂಬಳ ಗ್ರಾಮದಲ್ಲಿ ಶತಾಯುಷಿ ಅಜ್ಜಿ, ವಿಶೇಷ ಚೇತನ, ಹಿರಿಯ ನಾಗರಿಕರು ಮತ ಚಲಾವಣೆ.
ಮೊದಲ ಸಲ ಮತದಾನದ ಉತ್ಸಾಹದಲ್ಲಿ ಯುವತಿಯರು:
ಜಿಲ್ಲೆಯಲ್ಲಿ ಯುವ ಮತದಾರರಿಂದ ಉತ್ತಮ ಸ್ಪಂಧನೆ ದೊರಕಿದ್ದು. ಮತದಾರರು ತಮ್ಮ ಮತದಾನ ಮಾಡಲು ಬೆಳಗ್ಗೆ ಯಿಂದಲೇ ಸರತಿ ಸಾಲಿನಲ್ಲಿ ನಿಂತು ತಮ್ಮ ಮೊದಲ ಮತದಾನಕ್ಕಾಗಿ ಅತ್ಯಂತ ಉತ್ಸುಕತೆಯಿಂದ ಕಾಯಿತ್ತುರುವ ದೃಶ್ಯಗಳು ಕಂಡುಬಂದವು. ಗದಗ ಮತಕ್ಷೇತ್ರದ ಮತಗಟ್ಟೆ 76 ರಲ್ಲಿ ಪ್ರಥಮ ಬಾರಿಗೆ ಮತ ಚಲಾಣೆಗೆ ಆಗಮಿಸಿದ್ದ ಭಕ್ತಿ ಪುಣೇಕರ ಅವರು ಕಾತುರದಿಂದ ತಮ್ಮ ಸರದಿಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಮಾತನಾಡಿ ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸುವಂತೆ ತಿಳಿಸಿದ ಅವರು ಯಾವುದೇ ಆಮಿಷುಗಳಿಗೆ ಒಳಗಾಗದೇ ತಮ್ಮ ಮತ ಚಲಾಯಿಸುವಂತೆ ತಿಳಿಸಿದರು. ಲಕ್ಕುಂಡಿಯ ಅತ್ತಿಮಬ್ಬೆ ಐತಿಹಾಸಿಕ ಮಾದರಿ ಮತಗಟ್ಟೆಯಲ್ಲಿ ನೇತ್ರಾ ಅಬ್ಬಿಗೇರಿ, ನೇತ್ರಾವತಿ ಲಕ್ಕುಂಡಿ, ಹಾಗೂ ಬೆಳದಡಿ ತಾಂಡಾದ ಕವಿತಾ ಲಾಲಪ್ಪ ಹಳ್ಳಿ ಅವರುಗಳು ಪ್ರಥಮ ಬಾರಿಗೆ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.