ಗಜೇಂದ್ರಗಡ:ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ಆಲದಮರವೊಂದು ಬಸ್ ಮೇಲೆ ನೆಲಕ್ಕುರಳಿ, ಓರ್ವ ಮಹಿಳೆ ಗಂಭೀರ ಗಾಯ ಸೇರಿ ೧೦ ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾದ ಘಟನೆ ಸೋಮವಾರ ಸಂಜೆ ೪-೧೫ ಕ್ಕೆ ನಡೆದಿದೆ.
ಈ ಭಾಗದಲ್ಲಿ ಮಧ್ಯಾಹ್ನದಿಂದಲೇ ಮೋಡಕವಿದ ವಾತಾವರಣವಿತ್ತು. ಮಧ್ಯಾಹ್ನ 3 ಗಂಟೆಗೆ ಜೋರಾದ ಗಾಳಿ ಬೀಸಿತು. ಅದೇ ವೇಳೆ ಕಾಲಕಾಲೇಶ್ವರ ಗ್ರಾಮದ ಬಳಿ ಇರುವ ಆಲದ ಮರವೊಂದು ಗಜೇಂದ್ರಗಡ ದಿಂದ ಅಮಿನಗಡ ಕಡೆ ಹೊರಟಿದ್ದ ಬಸ್ ಮೇಲೆ ಉರುಳಿಬಿದ್ದಿದ್ದು, ಬಸ್ ಸಂಪೂರ್ಣ ನಜ್ಜು ನಜ್ಜಾಗಿದೆ. ಬಸ್ ನಲ್ಲಿದ್ದ ಹಿರೇಗೊಣ್ಣಾಗರದ ಅಂಜಲಿ ಜಾಲಿಮರದ (24) ಎಂಬ ಯುವತಿಗೆ ತೆಲೆ ಹಾಗೂ ಮುಖಕ್ಕೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ವೇಳೆ ಅನುಸೂಯ ಹಿರೇಮಠ(20), ಗಿರಿಜಾ ಹಿರೇಮಠ (30) ಶ್ರೀಶೈಲ್ ಲಾಯಲಗುಂದಿ (60), ಮುದುಕಪ್ಪ ಮ್ಯಾಗಲಮನಿ(45), ಕಲಾವತಿ ಹೂಗಾರ (35), ಕರಿಯಮ್ಮ ಪೂಜಾರ(48), ಪರಸಪ್ಪ ಹಡಪದ(46), ಮುದುಕಪ್ಪ ಮಾದರ(೩೪) ಸೇರಿ ೧೦ ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದ್ದು, ಗಜೇಂದ್ರಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಸಕಾಲದಲ್ಲಿ ಆಗಮಿಸಿದ 108:
ಕೆ.ಎಸ್.ಆರ್.ಟಿ.ಸಿ ಬಸ್ ಮೇಲೆ ಮರ ಬಿದ್ದ ತಕ್ಷಣವೇ ಸ್ಥಳೀಯರು ಹಾಗೂ ಕೆಲ ಪ್ರಯಾಣಿಕರು 108 ಕರೆ ಮಾಡಿದಾಗ ಸಕಾಲದಲ್ಲಿ ಆಗಮಿಸಿದ 108 ಬಸ್ ಸವಾರರನ್ನು ಆಂಬುಲೆನ್ಸ್ ನ ಇಎಮ್ ಟಿ ಶರಣಪ್ಪ ಮತ್ತು ಪೈಲಟ್ ಪರಶುರಾಮ್ ರವರು ಪ್ರಥಮ ಚಿಕಿತ್ಸೆ ನೀಡುವದರೊಂದಿಗೆ ಗಜೇಂದ್ರಗಡ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೃಹತ್ ಆಕಾರದ ಮರ ರಸ್ತೆಗೆ ಉರಳಿದ್ದರಿಂದ ಸಂಚಾರ ಅಸ್ತವ್ಯಸಗೊಂಡಿದೆ.