ನರಗುಂದ : ದೇಶದ ಸಂವಿಧಾನ ಮತದಾರರಿಗೆ ಒದಗಿಸಿರುವ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಿ ರಾಜ್ಯದಲ್ಲಿ ಸುಭದ್ರ ಸರ್ಕಾರ ರಚನೆಗೆ ಮುನ್ನುಡಿ ಬರೆಯಬೇಕೆಂದು ನರಗುಂದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಮಂಜುಳಾ ಹಕಾರಿ ಹೇಳಿದರು.
ತಾಲೂಕಿನ ಕೊಣ್ಣೂರು ಗ್ರಾಮದ ನರೇಗಾ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ್ದ ಕಡ್ಡಾಯ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮೇ-10 ರ ಮತದಾನಕ್ಕೆ ಮೂರು ದಿನಗಳ ಕಾಲ ಬಾಕಿಯಿದ್ದು, ಮತದಾನ ದಿನದಂದು ಮತದಾರರು ತಮ್ಮ ಮತ ಹಕ್ಕನ್ನು ತಪ್ಪದೇ ಚಲಾಯಿಸಬೇಕು. ದೇಶ, ರಾಜ್ಯ ಅಭಿವೃದ್ಧಿಯಾಗಬೇಕಾದರೆ ನಮ್ಮನ್ನಾಳುವ ಸರ್ಕಾರಗಳು ಸುಭದ್ರವಾಗಿರಬೇಕು. ಅಂತಹ ಸುಭದ್ರ ಸರ್ಕಾರ ರಚನೆಗೆ ಮತದಾರರ ಪ್ರತಿಯೊಂದು ಮತವೂ ಮುಖ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸುವ ಮೂಲಕ ಕಳೆದ ವಿಧಾನಸಭೆ ಚುನಾವಣೆಯ ಪ್ರಮಾಣಕ್ಕಿಂತ ಈ ಭಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಗಣನೀಯವಾಗಿ ಹೆಚ್ಚಳ ಆಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಣ್ಣೂರು ಗ್ರಾಮ ಪಂಚಾಯತಿ ಪಿಡಿಓ ಮಂಜುನಾಥ ಗಣಿ ಮಾತನಾಡಿ, ನಗರ ಪ್ರದೇಶಕ್ಕೆ ಹೋಲಿಕೆ ಮಾಡಿದರೆ ಗ್ರಾಮೀಣ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಿದೆ. ಇದೇ ವೇಗವನ್ನು ಕಾಪಾಡಿಕೊಂಡು ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 100% ರಷ್ಟು ಮತದಾನ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಹೀಗಾಗಿ ಎಲ್ಲ ಮತದಾರರು ಯಾವುದೇ ಅನ್ಯ ಕಾರಣ ಹೇಳಿ ಮತದಾನದಿಂದ ತಪ್ಪಿಸಿಕೊಳ್ಳಬಾರದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನರೇಗಾ ಕೂಲಿಕಾರರಿಗೆ ಕಡ್ಡಾಯ ಮತದಾನ ಕುರಿತು ಘೋಷಣೆಗಳನ್ನು ಹೇಳಿಸಲಾಯಿತು. 400 ಕ್ಕೂ ಅಧಿಕ ನರೇಗಾ ಕೂಲಿಕಾರರಿಗೆ ಮತದಾನ ಪ್ರತಿಜ್ಞಾ ವಿಧಿ ಭೋದನೆ ಮಾಡಿಸುವ ಮೂಲಕ ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.
ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿಗಳಾದ ಪ್ರಶಾಂತ ಜೆ.ಸಿ, ತಾಲೂಕ ಪಂಚಾಯತ ಸಿಬ್ಬಂದಿ, ನರೇಗಾ ಸಿಬ್ಬಂದಿ, ಗ್ರಾಮ ಪಂಚಾಯತ ಸಿಬ್ಬಂದಿ, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ನರೇಗಾ ಕೂಲಿಕಾರರು ಭಾಗವಹಿಸಿದ್ದರು.